
ಮಧು ಬಂಗಾರಪ್ಪ
ಸುವರ್ಣ ವಿಧಾನಸೌಧ (ಬೆಳಗಾವಿ): ‘ಕನ್ನಡ ನಮ್ಮ ರಕ್ತದಲ್ಲಿಯೇ ಇದೆ. ಒಂದೇ ಒಂದು ಮಗು ದಾಖಲಾಗಿದ್ದರೂ ರಾಜ್ಯದಲ್ಲಿನ ಯಾವ ಕನ್ನಡ ಶಾಲೆಯನ್ನೂ ಮುಚ್ಚುವುದಿಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ಚಿದಾನಂದ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘900 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಬಡವರು, ಪರಶಿಷ್ಟರು, ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಅದಕ್ಕಾಗಿ ಕೆಪಿಎಸ್ ಬಲಪಡಿಸಲಾಗುತ್ತಿದೆ. ದೂರದ ಗ್ರಾಮಗಳಿಂದ ಬರುವ ಮಕ್ಕಳಿಗೆ ಬಿಸಿಯೂಟ, ಉಚಿತ ಪಠ್ಯಪುಸ್ತಕಗಳ ಜತೆಗೆ ಬಸ್ ಸೌಕರ್ಯವನ್ನೂ ಕಲ್ಪಿಸಲಾಗುತ್ತಿದೆ’ ಎಂದರು.
ಪ್ರಸ್ತುತ ಇರುವ 309 ಕೆಪಿಎಸ್‌ಗಳಲ್ಲಿ 2,72,464 ವಿದ್ಯಾರ್ಥಿಗಳು ಇದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೂ ಒಂದು ಕೆಪಿಎಸ್ ಸ್ಥಾಪಿಸಲಾಗುವುದು. ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಕರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಖಾಲಿ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಉತ್ತಮ ಕಲಿಕೆ, ಉಜ್ವಲ ಭವಿಷ್ಯ ಎಂಬುದು ಧ್ಯೇಯ ವಾಕ್ಯವಾಗಿದ್ದು, ಪ್ರತಿ ಮಗುವೂ ಶಾಲೆಯಲ್ಲಿರಬೇಕು ಮತ್ತು ಚೆನ್ನಾಗಿ ಕಲಿಯಬೇಕು ಎಂಬ ಆಶಯದಿಂದ ರಾಜ್ಯದ ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳು ಏಕರೂಪದ ನೀತಿಯನ್ನು ಪಾಲಿಸುವಂತೆ ‘ಕರ್ನಾಟಕ ಪಬ್ಲಿಕ್ ಶಾಲಾ ಮಾನದಂಡ ಕೈಪಿಡಿ’ ಸಿದ್ಧಪಡಿಸಲಾಗಿದೆ. ಅದರಲ್ಲಿ ನಿಗದಿಪಡಿಸಿರುವ ಗುಣಮಟ್ಟದ ನಿಯಮದಂತೆ ಪ್ರತಿ ಶಾಲೆಯಲ್ಲೂ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಮತ್ತು ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಶೂ, ಸಾಕ್ಸ್ ವಿತರಣೆಗೆ ₹111.88 ಕೋಟಿ
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡಲು ₹111.88 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಬಿಜೆಪಿಯ ಕೇಶವ ಪ್ರಸಾದ್, ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 44,525 ಶಾಲೆಗಳಿಗೆ ಈಗಾಗಲೇ ವಿತರಣೆ ಮಾಡಲಾಗಿದೆ. ಬಾಕಿ 1,587 ಶಾಲೆಗಳಿಗೆ ಅಗತ್ಯವಿರುವ ₹13.20 ಕೋಟಿ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗಿದೆ ಎಂದರು.
‘ಭಗವದ್ಗೀತೆ ಬೋಧನೆ: ಸಂವಿಧಾನಕ್ಕೆ ವಿರುದ್ಧ’
ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿರುವುದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾರ್ಯದರ್ಶಿ ಕೆ.ಪ್ರಕಾಶ್, ‘ರಾಜ್ಯದಿಂದ ಆಯ್ಕೆಯಾಗಿರುವ ಸಚಿವರು ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಸಂಪನ್ಮೂಲ, ಅಭಿವೃದ್ಧಿಯತ್ತ ಗಮನವಹಿಸುವುದಕ್ಕೆ ಆದ್ಯತೆ ನೀಡಬೇಕು. ಧಾರ್ಮಿಕ ಭಾವನೆಗಳನ್ನು ರಾಜಕೀಯವಾಗಿ ಬಳಸಲು ಅಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಬೋಧಿಸಲು ಮಾಡಿದ ಪ್ರಯತ್ನಕ್ಕೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಈಗಿನ ಅವರ ಪತ್ರ ಹಿಂದಿನ ಅವರದೇ ನಿಲುವಿಗೆ ವ್ಯತಿರಿಕ್ತವಾಗಿದೆ’ ಎಂದು ತಿಳಿಸಿದ್ದಾರೆ.
‘ಭಗವದ್ಗೀತೆ, ಕುರ್‌ಆನ್, ಬೈಬಲ್ ಗ್ರಂಥಗಳನ್ನು ವೈಯಕ್ತಿಕವಾಗಿ ಓದಬಹುದು. ಅದರಲ್ಲಿ ತಮಗಿರುವ ಅಂಶಗಳನ್ನು ಮೌಲ್ಯಗಳೆಂದು ಪರಿಭಾವಿಸಬಹುದು ಮತ್ತು ಅನುಸರಿಸಲೂಬಹುದು. ಸಿಪಿಎಂ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ. ಎಲ್ಲ ಜಾತಿ, ಧರ್ಮ ಮತ್ತು ಧಾರ್ಮಿಕ ನಂಬಿಕೆಗಳಿಗೆ ಸೇರಿದ ವಿದ್ಯಾರ್ಥಿಗಳಿರುವ ಶೈಕ್ಷಣಿಕ ತರಗತಿಗಳಲ್ಲಿ ಒಂದು ಧರ್ಮದ ಗ್ರಂಥ ಬೋಧನೆ ಏನು ಪರಿಣಾಮ ಬೀರಲಿದೆ ಹಾಗೂ ಎಷ್ಟು ಸರಿ ಎಂಬುದುನ್ನು ಸಚಿವರು ಅರಿಯಬೇಕಿತ್ತು’ ಎಂದು ಹೇಳಿದ್ದಾರೆ.
‘ಭಗವದ್ಗೀತೆ ಸಾರುವ ಮೌಲ್ಯಗಳು, ಸಂದೇಶಗಳ ಬಗ್ಗೆ ತೀವ್ರ ಟೀಕೆ, ಆಕ್ಷೇಪ ಇರುವಾಗ ಅದನ್ನು ಸಾರ್ವಕಾಲಿಕ ಮೌಲ್ಯ ಸಾರುವ ಗ್ರಂಥವೆಂದು ಹೇಗೆ ಭಾವಿಸಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
‘ಸರ್ಕಾರಿ ಶಾಲೆ: ಗೊಂದಲ ಬಗೆಹರಿಸಿ’
ಬೆಂಗಳೂರು: ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂಬ ಆದೇಶವನ್ನು ಸರ್ಕಾರ ಹೊರಡಿಸಲಿ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ(ಎಐಡಿಎಸ್‌ಒ) ಆಗ್ರಹಿಸಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ಶಾಲೆ ಮುಚ್ಚುವುದಿಲ್ಲ. ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆ
ತೆರೆಯಲಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಅಕ್ಟೋಬರ್ 15ರಂದು ಹೊರಡಿಸುವ ಸುತ್ತೋಲೆಯಲ್ಲಿ ಕೆಪಿಎಸ್ ಶಾಲೆಗಳೊಂದಿಗೆ ಸುತ್ತಮುತ್ತಲಿನ ಕಡಿಮೆ ಹಾಜರಾತಿ ಇರುವ ಶಾಲೆ ವಿಲೀನಗೊಳಿಸುವುದಾಗಿ ತಿಳಿಸಲಾಗಿದೆ ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.
ಸರ್ಕಾರಿ ಆದೇಶ ಒಂದು ರೀತಿ ಇದ್ದರೆ, ಸಚಿವರು ಇನ್ನೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಯಾವುದನ್ನು ನಂಬಬೇಕು ಎನ್ನುವ ಗೊಂದಲ ಜನರಲ್ಲಿ ಮೂಡುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.