ADVERTISEMENT

ಬೆಂಗಳೂರು: ಅನುಭವ ಮಂಟಪ ರಥಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 15:53 IST
Last Updated 17 ಏಪ್ರಿಲ್ 2025, 15:53 IST
ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆಗೆ ಚಾಲನಾ ಕಾರ್ಯಕ್ರಮದಲ್ಲಿ ಕಲಾವಿದರು ನಂದಿಕೋಲು, ಡೊಳ್ಳು ಕುಣಿತ, ಯಕ್ಷಗಾನ ಪ್ರದರ್ಶಿಸಿದರು 
ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆಗೆ ಚಾಲನಾ ಕಾರ್ಯಕ್ರಮದಲ್ಲಿ ಕಲಾವಿದರು ನಂದಿಕೋಲು, ಡೊಳ್ಳು ಕುಣಿತ, ಯಕ್ಷಗಾನ ಪ್ರದರ್ಶಿಸಿದರು    

ಬೆಂಗಳೂರು: ‘ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸ್ವೀಕರಿಸಿದ್ದೇವೆ. ಅವರ ವಚನಗಳನ್ನು ರಾಜ್ಯದ ಜನರಿಗೆ ತಲುಪಿಸುವ ಉದ್ದೇಶದಿಂದ ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ’ಯನ್ನು ಆಯೋಜಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇದೇ 30ರಂದು ಕೂಡಲ ಸಂಗಮದಲ್ಲಿ ‘ಬಸವ ಜಯಂತಿ’ ಆಯೋಜಿಸಲಾಗಿದೆ. ಅದರ ಭಾಗವಾಗಿ, ವಿಧಾನಸೌಧದ ಎದುರು ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಯಾತ್ರೆಯ ಲಾಂಛನ ಬಿಡುಗಡೆ ಮಾಡಿ ಮತ್ತು ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

‘ಬಸವಣ್ಣನವರು ಸಮಾಜದ ಬದಲಾವಣೆಗಾಗಿ ತಾವು ಬದುಕಿರುವವರೆಗೂ ಪ್ರಯತ್ನಿಸಿದರು. ಅವರ ಅನುಭವ ಮಂಟಪ ಪರಿಕಲ್ಪನೆಯ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತು. ಇಲ್ಲಿ ಚರ್ಚೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಹಿಡಿದು ಅದನ್ನು ಜಾರಿ ಮಾಡುತ್ತಿದ್ದರು. ರಥಯಾತ್ರೆಯು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ’ ಎಂದರು.

ADVERTISEMENT

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಸಚಿವರಾದ ಶಿವರಾಜ ಎಸ್.ತಂಗಡಗಿ, ಆರ್.ಬಿ.ತಿಮ್ಮಾಪುರ, ಎಚ್.ಕೆ.ಪಾಟೀಲ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ, ಶರಣ ಪ್ರಕಾಶ ಪಾಟೀಲ,‌ ಸಾಹಿತಿ ಹಂಪ ನಾಗರಾಜಯ್ಯ, ಬಿ.ಟಿ.ಲಲಿತಾ ನಾಯಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಥದಲ್ಲಿ ಏನಿದೆ...

‘ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥ’ದಲ್ಲಿ ಬಸವಣ್ಣ ಅವರೊಂದಿಗೆ ಬಿ.ಆರ್‌.ಅಂಬೇಡ್ಕರ್‌ ಭಗವಾನ್‌ ಬುದ್ಧ ಅಕ್ಕಮಹಾದೇವಿ ಸಂತ ಶಿಶುನಾಳ ಶರೀಫ ಗುರುನಾನಕ್‌ ಭಗವಾನ್‌ ಮಹಾವೀರ ನಾರಾಯಣಗುರು ಯೇಸು ಕ್ರಿಸ್ತರ ಪ್ರತಿಮೆಗಳು ಇವೆ. ಎಲ್ಲಿಲ್ಲಿ ಸಂಚಾರ: ವಿಧಾನಸೌಧದಿಂದ ಗುರುವಾರ ಆರಂಭವಾಗಿರುವ ರಥಯಾತ್ರೆಯು ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಏಪ್ರಿಲ್‌ 29ಕ್ಕೆ ಕೂಡಲ ಸಂಗಮ ತಲುಪಲಿದೆ. ಬೆಂಗಳೂರು ಬೆಂಗಳೂರು ಗ್ರಾಮಾಂತರ ರಾಮನಗರ ಮಂಡ್ಯ ಮೈಸೂರು ತುಮಕೂರು ಚಿತ್ರದುರ್ಗ ಬಳ್ಳಾರಿ ರಾಯಚೂರು ಕಲಬುರಗಿ ವಿಜಯಪುರ ಸೇರಿ 15 ಜಿಲ್ಲೆಗಳಲ್ಲಿ ಒಟ್ಟು 1177 ಕಿ.ಮೀ. ಸಂಚರಿಸಿ ಬಾಗಲಕೋಟೆಗೆ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.