
ನವದೆಹಲಿ: ‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಇದೇ 13 ಹಾಗೂ 14ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸುವರು’ ಎಂದರು.
‘ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ 46 ಸಂಶೋಧನಾ ವರದಿಗಳನ್ನು ಮಂಡಿಸಲಾಗುತ್ತದೆ. ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ ಭೂಷಣ್ ಚೌಧರಿ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಭಾಗವಹಿಸಲಿದ್ದಾರೆ. 10 ದೇಶಗಳ 25 ಅಂತರರಾಷ್ಟ್ರೀಯ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
‘ನಮ್ಮಲ್ಲಿರುವ ಶೇ 75 ಅಣೆಕಟ್ಟುಗಳು 25 ವರ್ಷಕ್ಕಿಂತ ಹಳೆಯದಾಗಿದ್ದು, ಸುರಕ್ಷತೆ ವಿಚಾರದಲ್ಲಿ ರಾಜಿಯಾಗಲು ನಾವು ಬಯಸುವುದಿಲ್ಲ. ಪ್ರತಿ ವರ್ಷ ಅಣೆಕಟ್ಟುಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ. ಕೇಂದ್ರ ಸರ್ಕಾರವು ವಿಶ್ವಬ್ಯಾಂಕ್ ಹಾಗೂ ಎಐಐಬಿಯ ಬಾಹ್ಯ ಬೆಂಬಲದೊಂದಿಗೆ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (ಡ್ರಿಪ್) ಎರಡನೇ ಹಂತವನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕದಲ್ಲಿ 58 ಅಣೆಕಟ್ಟುಗಳ ಸುರಕ್ಷತೆಗೆ ₹1,500 ಕೋಟಿ ವೆಚ್ಚ ಮಾಡುತ್ತಿದ್ದೇವೆ. ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್‌ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಅದೇ ರೀತಿ ರಾಜ್ಯದ ಎಲ್ಲ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಆದ್ಯತೆ ಮೇರೆಗೆ ದುರಸ್ತಿ ಕಾಮಗಾರಿ ಕೈಗೊಂಡಿದ್ದೇವೆ‘ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.