ಬೆಂಗಳೂರು: ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸ್ತ್ರೀ ಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗುತ್ತಿದೆ. ಸರಣಿ ರೂಪದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಲ್ಲಿ ಆಟೋದಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅತ್ಯಂತ ಹೇಯ ಹಾಗೂ ರಾಕ್ಷಸೀ ಕೃತ್ಯವಾಗಿದೆ. ಮರುಕಳಿಸುತ್ತಲೇ ಇರುವ ಇಂಥಾ ಘಟನೆಗಳಿಂದ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆ ಕುಗ್ಗುತ್ತಿದೆ' ಎಂದು ಹೇಳಿದ್ದಾರೆ.
'ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಯಾರೊಬ್ಬರೂ ಈ ಬಗ್ಗೆ ಗಂಭೀರತೆ ಪ್ರದರ್ಶಿಸದೇ ಉಡಾಫೆ ಧೋರಣೆ ಅನುಸರಿಸುತ್ತಿರುವ ಪರಿ ನೋಡಿದರೆ ‘ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ’ ನಿಂತಿರುವ ಅನುಮಾನ ಮೂಡಿಸುತ್ತಿದೆ' ಎಂದು ಆರೋಪಿಸಿದ್ದಾರೆ.
'ತಕ್ಷಣವೇ ಯುವತಿಯ ರಕ್ಷಣೆಗೆ ಮುಂದಾಗಿ ಪೈಶಾಚಿಕ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.