ADVERTISEMENT

ಹಳದಿ ಮೆಟ್ರೊ ಮಾರ್ಗ ಬೇಗ ಆರಂಭಕ್ಕೆ ಒತ್ತಾಯ: ಇದು ವೇಗದ ಆಡಳಿತದ ಯುಗ; ತೇಜಸ್ವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 19:15 IST
Last Updated 6 ಆಗಸ್ಟ್ 2025, 19:15 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಅನಗತ್ಯ ಆತುರದಲ್ಲಿರುವ ಯುವಕ ಎಂದು ಕರೆದಿದ್ದಾರೆ. ಆದರೆ, ಇದು ನಿಧಾನಗತಿಯ ರಾಜಕೀಯದ ಯುಗವಲ್ಲ. ವೇಗದ ಆಡಳಿತದ ಯುಗ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

‘ಹಳದಿ ಮೆಟ್ರೊ ಮಾರ್ಗವನ್ನು ಬೇಗನೆ ಆರಂಭಿಸಲು ನಾನು ಪದೇ ಪದೇ ಒತ್ತಾಯಿಸಿರುವುದರಿಂದ ಆತುರದ ಯುವಕ ಎಂದು ಅವರು ನನ್ನನ್ನು ಕರೆದಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ಹೌದು, ನನಗೆ ಆತುರವಿದೆ. ಏಕೆಂದರೆ ಸಾರ್ವಜನಿಕ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ದಶಕಗಳ ಅವಧಿ ಬೇಕೆಂಬುದನ್ನು ನಾನು ನಂಬುವುದಿಲ್ಲ. 2 ಕಿ.ಮೀ ಫ್ಲೈಓವರ್‌ಗೆ ಎಂಟೂವರೆ ವರ್ಷ ಬೇಕೆಂಬುದನ್ನು ನಾನು ಒಪ್ಪುವುದಿಲ್ಲ. ನಾನು ಬದಲಾವಣೆಯನ್ನು ಇಂದೇ ಬಯಸುವ ಭಾರತೀಯರ ಪೀಳಿಗೆಯನ್ನು ಪ್ರತಿನಿಧಿಸುತ್ತೇನೆ. ಯಾವುದೇ ಅನಿರ್ದಿಷ್ಟ ಭವಿಷ್ಯದಲ್ಲಿ ಅಲ್ಲ’ ಎಂದಿದ್ದಾರೆ.

ADVERTISEMENT

‘ನಮ್ಮ ಬೆಂಗಳೂರು ಸಂಚಾರ ದಟ್ಟಣೆಯ ಕಾರಣದಿಂದ ಉಸಿರುಗಟ್ಟುತ್ತಿರುವುದರಿಂದ ನನಗೆ ಆತುರವಿದೆ. ಏಕೆಂದರೆ ಪ್ರಯಾಣಿಕರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಾರೆ. ಅಲ್ಲಿ ಸಮಸ್ಯೆಗೆ ಸಿಲುಕುವವರು ಸಾಮಾನ್ಯ ನಾಗರಿಕರೇ ವಿನಾ ಮಂತ್ರಿಗಳಲ್ಲ. ನನ್ನ ವಯಸ್ಸಿನ ಬಗ್ಗೆ ವೈಯಕ್ತಿಕವಾಗಿ ವ್ಯಂಗ್ಯವಾಡುವ ಬದಲು, ಹಳದಿ ಮಾರ್ಗವನ್ನು ತ್ವರಿತಗೊಳಿಸಲು ಅವರು ಮಾಡಿದ ಒಂದೇ ಒಂದು ನಿರ್ದಿಷ್ಟ ಪರಿಹಾರದ ಬಗ್ಗೆ ತಿಳಿಸಲಿ’ ಎಂದಿದ್ದಾರೆ.

‘ಭೂಸ್ವಾಧೀನ ಸಾಧ್ಯವಾಗದೇ ಯೋಜನೆ ನಿಂತಾಗ ಅವರು ಎಲ್ಲಿದ್ದರು? ಪೂರ್ಣಾವಧಿಯ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗಾಗಿ ಹೋರಾಡುತ್ತಿದ್ದಾಗ ಅವರು ಎಲ್ಲಿದ್ದರು? ಯೋಜನೆಯ ಸಮಯಕ್ಕೆ ಸರಿಯಾಗಿ ರೋಲಿಂಗ್ ಸ್ಟಾಕ್‌ ಅನ್ನು ತಲುಪಿಸಲು ನಾವು ವಿವಿಧ ಸಚಿವಾಲಯಗಳು ಮತ್ತು ತಯಾರಕರೊಂದಿಗೆ ಸಮನ್ವಯ ಸಾಧಿಸಬೇಕಾದ ಸಂದರ್ಭದಲ್ಲಿ ಅವರು ಎಲ್ಲಿದ್ದರು’ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

‘ಉದ್ಘಾಟನೆಯ ದಿನಾಂಕ ನಿಗದಿಗೆ ಒತ್ತಾಯಿಸಿ, ನಾನು ನಾಗರಿಕರ ಮೆರವಣಿಗೆಯನ್ನು ಮುನ್ನಡೆಸಿದಾಗ ಅವರು ಎಲ್ಲಿದ್ದರು? ಪ್ರಧಾನಿಯವರು ಉದ್ಘಾಟನೆಗೆ ಬರುವ ಕೆಲವು ದಿನಗಳ ಮುಂಚೆ ಮಾಧ್ಯಮಗಳ ಎದುರು ಸರ್ಕಸ್‌ ಮಾಡುವುದು ಎಷ್ಟು ಸರಿ’ ಎಂದು ಅವರು ಕಾಲೆಳೆದಿದ್ದಾರೆ.

‘ಪರ್ಮನೆಂಟ್‌ ಹಾನಿ ಮಾಡುತ್ತಿರುವ ಎಮರ್ಜೆನ್ಸಿ ಸೂರ್ಯ’

‘ನಾನು ಅರ್ಜೆಂಟ್‌ ಯುಗದವನು ಕಾಯಲು ಸಮಯವಿಲ್ಲ. ಕೂಡಲೇ ಮೆಟ್ರೊ ಹಳದಿ ಮಾರ್ಗ ಉದ್ಘಾಟನೆಯಾಗಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಇದೇ ರೀತಿ ಅರ್ಜೆಂಟ್‌ ಮಾಡಿ ವಿಮಾನದ ಎಮರ್ಜೆನ್ಸಿ ಎಕ್ಸಿಟ್‌ ತೆಗೆಯಲು ಹೋಗಿ ನೂರಾರು ಪ್ರಯಾಣಿಕರ ಪ್ರಾಣ ಒತ್ತೆ ಇಟ್ಟಿದ್ದರು’ ಎಂದು ಕೆಪಿಸಿಸಿ ವಕ್ತಾರ ಶಂಕರ ಗುಹಾ ದ್ವಾರಕನಾಥ್ ಟೀಕಿಸಿದ್ದಾರೆ.

ನಿಧಾನವೇ ಪ್ರಧಾನ. ಸಮಾಧಾನದಿಂದ ಇದ್ದವರು ಗೆಲ್ಲುತ್ತಾರೆ. ದೇಶದಲ್ಲಿ 2021 ರಿಂದ 2025 ರವರೆಗೆ 170 ಸೇತುವೆಗಳು ಕುಸಿದಿವೆ. ಸುಮಾರು 250 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತಿನಲ್ಲಿ ಸೇತುವೆ ಕುಸಿತವಾಗಿ 160 ಜನರು ಪ್ರಾಣ ಕಳೆದುಕೊಂಡಿರುವುದು ಪ್ರಮುಖವಾದುದು. ಇದೆಲ್ಲವು ಅರ್ಜೆಂಟಾಗಿ ಮಾಡಿದ ಕೆಲಸದ ಪ್ರಭಾವ ಎಂದು ಹೇಳಿಕೆ ನೀಡಿದ್ದಾರೆ.

ಮೆಟ್ರೊ ವಿಚಾರದಲ್ಲಿ ಆತುರ ಬೇಡ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸುಮಾರು 40 ವರ್ಷಗಳ ರಾಜಕೀಯ ಅನುಭವವಿದೆ. ಒಮ್ಮಿಂದೊಮ್ಮೆಲೆ ಮೆಟ್ರೊ ಸಂಚಾರ ಆರಂಭಿಸಿ ಅಪಾಯ ಉಂಟು ಮಾಡುವ ಬದಲು ಪ್ರಾಯೋಗಿಕವಾಗಿ ಪ್ರಯಾಣ ಮಾಡಿ ಅವರು ಸುರಕ್ಷತೆ ಖಚಿತಪಡಿಸಿಕೊಂಡಿದ್ದಾರೆ. ನೀವಿನ್ನೂ ಕಿರಿಯರು. ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯವಿದೆ. ತಾಳ್ಮೆಯಿಂದ ಕೆಲಸ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ರಾಘವೇಂದ್ರ ಬ್ಯಾಂಕ್ ಹಾಗೂ ವಸಿಷ್ಟ ಕೋ ಆಪರೇಟಿವ್ ಸೊಸೈಟಿ ವಿಚಾರದಲ್ಲಿ ಯಾಕೆ ತಮ್ಮ ಅರ್ಜೆಂಟ್ ಬಟನ್ ಅನ್ನು ಒತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.