ಬೆಂಗಳೂರು: ಬೆಂಗಳೂರು– ಮೈಸೂರು ಮೂಲಸೌಲಭ್ಯ ಕಾರಿಡಾರ್ ಯೋಜನೆಯನ್ನು ಜಾರಿ ಮಾಡುತ್ತಿರುವ ನೈಸ್ ಸಂಸ್ಥೆಯ ಕಾರ್ಯನಿರ್ವಹಣೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ಸಂಪುಟ ಉಪಸಮಿತಿ ರಚಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಉಪ ಸಮಿತಿ ರಚಿಸುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಗುರುತಿಸಿರುವ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯದ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ತೀರ್ಪು ನೀಡಿ ಭೂಸ್ವಾದೀನವನ್ನು ರದ್ದುಗೊಳಿಸಿವೆ. ಸಿವಿಲ್ ಕೋರ್ಟ್‌ನಲ್ಲಿ 189, ಹೈಕೋರ್ಟ್‌ನಲ್ಲಿ 164, ಸುಪ್ರೀಂಕೋರ್ಟ್‌ನಲ್ಲಿ 21 ಒಟ್ಟು 374 ಪ್ರಕರಣಗಳು ಇತ್ಯರ್ಥವಾಗಿಲ್ಲ ಎಂದು ಹೇಳಿದರು.
1998–99 ರಲ್ಲಿ 23,625 ಎಕರೆ ಖಾಸಗಿ ಜಮೀನು ಹಾಗೂ 5,688 ಎಕರೆ ಸರ್ಕಾರಿ ಜಮೀನು ಹೀಗೆ ಒಟ್ಟು 29,313 ಎಕರೆ ಜಮೀನಿಗೆ ಭೂಸ್ವಾಧೀನ ಮಾಡಿಕೊಳ್ಳಲು ಸಚಿವ ಸಂಪುಟದ ಅನುಮೋದನೆ ಪಡೆಯದೇ ಕೆಐಎಡಿಬಿ ಒಪ್ಪಂದ ಮಾಡಿಕೊಂಡಿದೆ. ಬಿಎಂಐಸಿಎ ಯೋಜನೆಗೆ ಸಂಬಂಧಿಸಿದಂತೆ ಕೆಐಎಡಿಬಿ ಕಾಯ್ದೆಯಂತೆ 25,616 ಎಕರೆ ಅನುಸೂಚಿತ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿದೆ. ಖಾಸಗಿ ಜಮೀನುಗಳಿಗೆ 18,058 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, 4,809 ಎಕರೆ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
13,249 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. 2,268 ಎಕರೆ ಜಮೀನಿಗೆ ಐತೀರ್ಪಿನ ಅನ್ವಯ ₹316 ಕೋಟಿ ಪರಿಹಾರವನ್ನು ಭೂಮಾಲೀಕರುಗಳಿಗೆ ವಿತರಣೆ ಮಾಡಲಾಗಿದೆ. ನೈಸ್ ಸಂಸ್ಥೆಗೆ ಇಲ್ಲಿಯವರೆಗೂ 2191 ಎಕರೆ ಖಾಸಗಿ ಜಮೀನು ಮತ್ತು 5,000 ಎಕರೆ ಸರ್ಕಾರಿ ಜಮೀನು ಹಸ್ತಾಂತರ ಮಾಡಲಾಗಿದೆ. 2 ಎಕರೆ ಸರ್ಕಾರಿ ಜಮೀನು ಸೇರಿದಂತೆ 1,699 ಎಕರೆ ಜಮೀನಿಗೆ ಕೆಐಎಡಿಬಿಯಿಂದ ನೈಸ್ ಸಂಸ್ಥೆಗೆ ಶುದ್ಧ ಕ್ರಯಪತ್ರ ಮಾಡಲಾಗಿದೆ. ಈ ಎಲ್ಲ ವಿಚಾರಗಳನ್ನೂ ಸಂಪುಟ ಉಪಸಮಿತಿ ಚರ್ಚಿಸಲಾಗುವುದು ಎಂದು ಪಾಟೀಲ ಹೇಳಿದರು.
ಅರಮನೆ ಜಾಗಕ್ಕೆ ಭಾಗಶಃ ಟಿಡಿಆರ್:
ರಸ್ತೆ ಮತ್ತು ಇತರ ಉದ್ದೇಶಗಳಿಗಾಗಿ ಬಳಸಿದ ಬೆಂಗಳೂರು ಅರಮನೆ ಜಾಗಕ್ಕೆ ಭಾಗಶಃ ಟಿಡಿಆರ್ ಠೇವಣಿ ಇಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.
1217 ಚದರ ಮೀಟರ್ ಅನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ. ಠೇವಣಿ ಇಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.