ADVERTISEMENT

ಉದ್ಯಮಿ ಟೀಕೆ ನಿಲ್ಲಿಸಿ, ಗುಂಡಿ ಮುಚ್ಚಿ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 13:35 IST
Last Updated 19 ಅಕ್ಟೋಬರ್ 2025, 13:35 IST
ಎಚ್‌.ಡಿ.ಕುಮಾರಸ್ವಾಮಿ 
ಎಚ್‌.ಡಿ.ಕುಮಾರಸ್ವಾಮಿ    

ಬೆಂಗಳೂರು: ‘ರಸ್ತೆ ಗುಂಡಿಗಳನ್ನು ಮುಚ್ಚುವ ಬದಲು, ಉದ್ಯಮಿ ಕಿರಣ್‌ ಮಜುಂದಾರ್ ಶಾ ಅವರನ್ನು ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಟೀಕೆಗಳನ್ನು ನಿಲ್ಲಿಸಿ, ಗುಂಡಿಗಳನ್ನು ಮುಚ್ಚಿ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಉದ್ಯಮಿ ಶಾ ಅವರು ಹೇಳಿದ್ದು ಒಂದೆಡೆ ಇರಲಿ. ಬೆಂಗಳೂರಿನ ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ಇವೆ ಎಂದು ಮಾಧ್ಯಮಗಳು ಪ್ರತಿದಿನವೂ ವರದಿ ಮಾಡುತ್ತಿವೆ. ಅದು ಸುಳ್ಳೇ’ ಎಂದು ಪ್ರಶ್ನಿಸಿದರು.

‘ರಸ್ತೆಗುಂಡಿಗಳಿಂದ ನಗರದ ಜನರಿಗೆ ತೀರಾ ತೊಂದರೆಯಾಗುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದ ಎರಡೂ ಅವಧಿಯಲ್ಲಿ, ರಸ್ತೆಗುಂಡಿಗಳ ಬಗ್ಗೆ ಯಾವ ಉದ್ಯಮಿಯೂ ಟೀಕೆ ಮಾಡಿರಲಿಲ್ಲ. 2006–07ರ ಅವಧಿಯಲ್ಲಿ 59 ರಸ್ತೆಗಳ ವಿಸ್ತರಣೆಗೆ ಮಂಜೂರಾತಿ ನೀಡಿ, ಐದಾರು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗಿತ್ತು. ಈ ಸರ್ಕಾರವು ವರ್ಷಗಳಾದರು, ಯಾವ ಕಾಮಗಾರಿಯನ್ನೂ ಮುಗಿಸಿಲ್ಲ. ಕೆಲಸ ಮಾಡಲು ಇವರಿಗೆ ಇರುವ ತೊಡಕಾದರೂ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದರು.

ADVERTISEMENT

‘ಇವರು ಹೊಸ ಕಾಮಗಾರಿ ಯಾವುದನ್ನೂ ಮಾಡುತ್ತಿಲ್ಲ. ನನ್ನ ಅವಧಿಯಲ್ಲಿ ಮಂಜೂರಾತಿ ನೀಡಿದ ಕೆಲಸಗಳನ್ನೇ ಇನ್ನೂ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಉದ್ಯಮಗಳಿಗೆ ಕೊಡುವ ಸವಲತ್ತು ಮತ್ತು ರಿಯಾಯಿತಿಗಳ ಬಗ್ಗೆ ಮಾತನಾಡಿದರೆ, ಅಲ್ಲಿಗೇ ಹೋಗಿ ಎನ್ನುತ್ತಾರೆ. ಹೀಗೆ ಹೇಳುತ್ತಿದ್ದರೆ, ರಾಜ್ಯಕ್ಕೆ ಯಾವ ಉದ್ಯಮ ಬರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಿಷ್ಟಾಚಾರ ಲೋಪ: ತಲೆಕೆಡಿಸಿಕೊಳ್ಳಲ್ಲ’ 

‘ನಾನು ಶಿಷ್ಟಾಚಾರಕ್ಕೆ ಆದ್ಯತೆ ಕೊಡುವ ವ್ಯಕ್ತಿ ಅಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ. ನನಗೆ ದೇವಿಯ ದರ್ಶನ ಮುಖ್ಯ ದೇವಿಯ ದರ್ಶನ ಸಿಕ್ಕಿತು. ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಕೂಡ ಯಾವುದೇ ತೊಂದರೆಗೆ ಒಳಗಾಗದೆ ನೆಮ್ಮದಿಯಾಗಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಶಿಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಗೆ ತೊಂದರೆ. ಅವರಿಗೇಕೆ ತೊಂದರೆ ಕೊಡಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯದ ವೇಳೆ ಅಧಿಕಾರಿಗಳು ಹೊರಗೆ ಮಲಗುತ್ತಿದ್ದರು. ನನ್ನಿಂದ ಅವರಿಗೆ ತೊಂದರೆಯಾಗಿದೆ. ಹೀಗಾಗಿ ಈಗ ಶಿಷ್ಟಾಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.