ADVERTISEMENT

ರಸ್ತೆ ಗುಂಡಿ ಮುಚ್ಚಲು ₹ 750 ಕೋಟಿ ಅನುದಾನ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 15:39 IST
Last Updated 25 ಸೆಪ್ಟೆಂಬರ್ 2025, 15:39 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ₹ 750 ಕೋಟಿ ಅನುದಾನ ನೀಡಿದ್ದಾರೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬಿಜೆಪಿ ಆಡಳಿತಾವಧಿಯಲ್ಲಿ ಆಗಿದ್ದ ರಸ್ತೆಗುಂಡಿಗಳನ್ನು ನಾವು ಮುಚ್ಚುತ್ತಿದ್ದೇವೆ. ಅವರು (ಬಿಜೆಪಿಯವರು) ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಿಲ್ಲ. ಒಂದೇ ಒಂದು ಮೇಲ್ಸೇತುವೆ ಮಾಡಿಲ್ಲ. ಹೀಗಾಗಿಯೇ ಜನರು ನಮ್ಮ ಕೈಗೆ ಅಧಿಕಾರ ಕೊಟ್ಟಿದ್ದಾರೆ’ ಎಂದರು.

‘ಬಿಜೆಪಿಯವರು ಕೇಂದ್ರದಿಂದ ಬೆಂಗಳೂರಿಗೆ ಒಂದು ರೂಪಾಯಿ ಅನುದಾನ ಕೊಡಿಸಿದ್ದಾರೆಯೇ? ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ’ ಎಂದೂ ತಿರುಗೇಟು ನೀಡಿದರು.

ADVERTISEMENT

‘ಎಲ್ಲೆಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆಯೊ ಅಲ್ಲಿಗೆ ಆಯಾಯ ಕ್ಷೇತ್ರದ ಶಾಸಕರು ತೆರಳಿ ಪರಿಶೀಲಿಸಿ, ಗುಂಡಿಗಳನ್ನು ಮುಚ್ಚಿಸಿಕೊಳ್ಳಲಿ’ ಎಂದರು.

‘ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲು ಆಗುವುದಿಲ್ಲ. ಬಿಜೆಪಿಯವರು ಪ್ರತಿಭಟನೆ ವೇಳೆ ಗುಂಡಿ ತುಂಬಿದಂತೆ ಮಾಡಲು ಆಗುವುದಿಲ್ಲ. ಗುಂಡಿಗಳ ಸುತ್ತಲು ಕತ್ತರಿಸಿ ಸರಿಯಾಗಿ ಜಲ್ಲಿ ತುಂಬಿ ನಂತರ ರೋಡ್ ರೋಲರ್ ಮೂಲಕ ದುರಸ್ತಿ ಮಾಡಬೇಕಾಗುತ್ತದೆ’ ಎಂದರು. 

‘ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂದು ತಿಳಿಸಲು ನಾವೇ ಸಾರ್ವಜನಿಕರಿಗೆ ತಿಳಿಸಿದ್ದೆವು. ಅಧಿಕಾರಿಗಳು ಗುಂಡಿಗಳನ್ನು ಮುಚ್ಚದೇ ಇರಬಹುದು. ಆದರೆ ಜನರೇ ಜಾಗೃತರಾಗಿ ಮಾಹಿತಿ ನೀಡಿ ಎಂದು ಹೇಳಿದ್ದೆವು. ಸಾವಿರಾರು ಜನರು ಜಾಗಗಳನ್ನು ಗುರುತಿಸಿ ಫೋಟೊಗಳನ್ನು ಕಳುಹಿಸಿದ್ದಾರೆ. ಜೊತೆಗೆ ಸಂಚಾರಿ ಪೊಲೀಸರು ತಿಳಿಸಿದ ಜಾಗಗಳಲ್ಲಿಯೂ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವಾಗುತ್ತಿದೆ’ ಎಂದರು.

‘ಗಡುವಿನ ಒಳಗೆ ಎಲ್ಲ ಗುಂಡಿಗಳನ್ನು ಮುಚ್ಚಲಾಗುತ್ತದೆಯೇ’ ಎಂಬ ಪ್ರಶ್ನೆಗೆ, ‘ಇದು ನಿರಂತರ ಪ್ರಕ್ರಿಯೆ. ಮಳೆ ಹೆಚ್ಚಾದರೆ ರಸ್ತೆಗುಂಡಿಗಳು ಉಂಟಾಗುತ್ತವೆ. ದೊಡ್ಡ ವಾಹನಗಳು ಚಲಿಸಿದರೆ ಉಂಟಾಗುತ್ತವೆ. ಈಗ ವಿಧಾನಸೌಧದ ಮುಂದಿನ ರಸ್ತೆಯಲ್ಲಿಯೇ  ಗುಂಡಿಗಳಾಗಿವೆ. ಮುಖ್ಯರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗುವವರೆಗೆ ಈ ಸಮಸ್ಯೆ ಇದ್ದೇ ಇರುತ್ತದೆ. ರಸ್ತೆಯಲ್ಲಿ ಕಸ ಎಸೆಯುವುದು ಮತ್ತಿತರ ಕೆಲಸಗಳನ್ನು ಮಾಡುವುದು ಬಿಟ್ಟು ಜನರು ನಮಗೆ ಸಹಕಾರ ನೀಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯ’ ಎಂದರು.

ಪ್ರಧಾನಿ ನಿವಾಸದ ರಸ್ತೆಯಲ್ಲಿ ಗುಂಡಿ ಇದೆ ಎಂದು ಹೇಳಿದ್ದನ್ನೇ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಟೀಕೆ ಮಾಡಲಿ. ಅವರು ಹೇಳಿದರೆ ನಾವು ತಿದ್ದಿಕೊಳ್ಳಲು ತಯಾರಿದ್ದೇವೆ’  ಎಂದರು.

ರಸ್ತೆಗುಂಡಿ ಸಮಸ್ಯೆ ನಿವಾರಿಸಲು ಶಾಶ್ವತ ಪರಿಹಾರದ ಬಗ್ಗೆ ಕೇಳಿದಾಗ, ‘ವೈಟ್ ಟಾಪಿಂಗ್ ಹಾಗೂ ಹೊಸ ರಸ್ತೆ ಮಾಡುವ ಬಗ್ಗೆ ಆಲೋಚನೆ ಮಾಡಲಾಗುವುದು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.