ADVERTISEMENT

ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ವೇಗವರ್ಧಕ: ಅನಿಲ್ ಕುಮಾರ್

ಬೆಂಗಳೂರು ತಂತ್ರಜ್ಞಾನ ಶೃಂಗ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 13:35 IST
Last Updated 18 ನವೆಂಬರ್ 2021, 13:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ತೀವ್ರ ರೀತಿಯಲ್ಲಿ ವ್ಯಾಪಕವಾಗುತ್ತಿರುವ ಕೃತಕ ಬುದ್ದಿಮತ್ತೆಯು ತಂತ್ರಜ್ಞಾನದ ಇನ್ನೊಂದು ಮಜಲು ಮಾತ್ರವಲ್ಲದೆ ಜೀವನ ವಿಧಾನವೇ ಆಗಿ ಆವರಿಸಿಕೊಳ್ಳಲಿದೆ ಎಂದು ಗ್ಲೋಬಲ್ ಬ್ಯುಸಿನೆಸ್ ಸರ್ವಿಸ್ ಟೆಲಸ್ಟ್ರಾ ಇಂಡಿಯಾದ ಎಂ.ಡಿ. ಮತ್ತು ಭಾರತ ಘಟಕದ ಮುಖ್ಯಸ್ಥ ಎನ್.ಟಿ. ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನ ಶೃಂಗ-2021ರ ಎರಡನೇ ದಿನವಾದ ಗುರುವಾರ ನಡೆದ ‘ಕೃತಕ ಬುದ್ದಿಮತ್ತೆಯ ಬೆಳವಣಿಗೆ, ವಿಕಾಸ ಮತ್ತು ಮಾರ್ಪಾಡು’ ಎಂಬ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ, .ಕೃತಕ ಬುದ್ದಿಮತ್ತೆ ಪೂರಕ ಕ್ಷೇತ್ರಗಳ ವೇಗವರ್ಧಕದಂತೆ ಕೆಲಸ ಮಾಡಡಲಿದ್ದು ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗಲಿವೆ ಎಂದರು.

ಕೃತಕ ಬುದ್ದಿಮತ್ತೆ ಕ್ಷೇತ್ರದ ಅಭಿವೃದ್ಧಿ ಮತ್ತು ಅನುಷ್ಠಾನದ ಬೆಳವಣಿಗೆಯಿಂದ ವ್ಯಕ್ತಿಗಳು, ಸಮೂಹ, ಸಂಸ್ಥೆಗಳು, ವ್ಯಾಪಾರ, ಉದ್ದಿಮೆ, ಆರೋಗ್ಯ ಮುಂತಾದ ಸಮಾಜದ ಎಲ್ಲ ಸ್ತರದ ಕ್ಷೇತ್ರಗಳ ದಿಕ್ಕುದೆಸೆಗಳೇ ಬದಲಾಗಲಿವೆ. ಕೃತಕ ಬುದ್ದಿಮತ್ತೆಯ ಜತೆಗೆ ರೋಬೋಟಿಕ್ಸ್, ಮಷೀನ್ ಲರ್ನಿಂಗ್ ಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಲಿದ್ದು ತ್ವರಿತ ಸಾಮಾಜಿಕ ವಿಕಾಸಕ್ಕೆ ಕಾರಣವಾಗಲಿದೆ ಎಂದು ವಿವರಿಸಿದರು.

ಕೃತಕ ಬುದ್ದಿಮತ್ತೆ ಎಂದರೆ ನಿರ್ದಿಷ್ಟತೆಯ ಸಂಕೇತ. ಮೊಬೈಲ್ ಒಂದರ ಆ್ಯಪ್ ನಿಂದ ಹಿಡಿದು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಮಾಡುವವರೆಗೂ ಕೃತಕ ಬುದ್ದಿಮತ್ತೆಯು ವ್ಯಾಪಕತೆ ಇದೆ. ಆದರೆ, ಇದರ ಜತೆಜತೆಗೆ ಏಳುವ ನೈತಿಕ ಪ್ರಶ್ನೆಗಳು ಮತ್ತು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ ಎಂದರು.

ADVERTISEMENT

ಕೃತಕ ಬುದ್ದಿಮತ್ತೆಯ ಕ್ಷೇತ್ರದಲ್ಲಿ ಭಾರತದ ಸಾಧನೆ ಜಾಗತಿಕವಾಗಿ ಗಮನಾರ್ಹವಾಗಿದೆ. ಈ ಸಾಧನೆಗೆ ಮೂರು ದಶಕಗಳ ಪರಿಶ್ರಮವಿದೆ. ಇವತ್ತಿನ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮಗಳು ವಿವಿಧ ಸ್ತರಗಳಿಗೆ ತಂತ್ರಜ್ಞಾನವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಜಾಗತಿಕವಾಗಿ ಅತಿ ಹೆಚ್ಚಿನ ವಿದ್ಯನ್ಮಾನ ಪಾವತಿಗೆ ದೇಶ ಸಾಕ್ಷಿಯಾಗಿದೆ. ವ್ಯವಸ್ಥೆ ಮತ್ತು ವಿದ್ಯುನ್ಮಾನ ಕಂದಕಗಳ ನಿವಾರಣೆಯಿಂದ ಹೆಚ್ಚು ಪ್ರಜಾಸತ್ತಾತ್ಮಕತೆ ಸಾಧ್ಯವಾಗುತ್ತದೆ. ಭಾರತದ ಜನಸಂಖ್ಯೆ ಮತ್ತು ಚಾಲಿತ ದತ್ತಾಂಶದ ವೇಗ ದೇಶವನ್ನು ಇನ್ನಷ್ಟು ಸದೃಢ ಮಾಡಲಿದೆ. ತಾಂತ್ರಿಕತೆಯೊಂದರ ವೇಗಕ್ಕೆ ದತ್ತಾಂಶವೇ ಇಂಧನವಾಗಿ ಕೆಲಸ ಮಾಡುತ್ತದೆ. ತಾಂತ್ರಿಕತೆಯನ್ನು ಇನ್ನಷ್ಟು ಸಾರ್ವತ್ರೀಕಗೊಳಿಸುವ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಹುದು. ಈ ನಿಟ್ಟಿನಲ್ಲಿ ಸರ್ಕಾರಗಳು ಕೂಡ ತ್ವರಿತವಾಗಿ ಕೆಲಸ ಮಾಡುತ್ತಿದ್ದು ದತ್ತಾಂಶ ರಕ್ಷಣೆ ಮತ್ತಿತರ ವಿಷಯಗಳಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟಿವೆ ಎಂದು ಶ್ಲಾಘಿಸಿದರು.

ಕೊನೆಯಲ್ಲಿ, ಕನ್ನಡದಲ್ಲಿ ನಮಸ್ಕಾರ ಎನ್ನುವ ಮೂಲಕ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆ ಸಚಿವ ಸ್ಟೀಫನ್ ಪ್ಯಾಟರ್ಸನ್ ಅವರು, ಕೋವಿಡ್ ವ್ಯಾಕ್ಸಿನ್ ಅನ್ನು 100 ಕೋಟಿ ಜನರಿಗೆ ಯಶಸ್ವಿಯಾಗಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಕೃತಕ ಬುದ್ದಿಮತ್ತೆ ಸೇರಿದಂತೆ ಇತರ ತಾಂತ್ರಿಕ ಕ್ಷೇತ್ರಗಳ ಬೆಳವಣಿಗೆಯಲ್ಲಿ ಭಾರತದ ಪಾತ್ರವನ್ನು ಹಾಗೂ ಮೋದಿಯವರ ನಾಯಕತ್ವವನ್ನು ಕೊಂಡಾಡಿದರು.

**
ಕೃತಕ ಬುದ್ದಿಮತ್ತೆ ತಾಂತ್ರಿಕತೆ ಎತ್ತುವ ನೈತಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕಂಪ್ಯೂಟರ್ ವಿಜ್ಞಾನಿಗಳಿಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಮಾಜ ವಿಜ್ಞಾನಿಗಳು ಮತ್ತು ಇತರ ಕ್ಷೇತ್ರಗಳ ತಜ್ಞರೊಂದಿಗೆ ಸಂವಾದ ಮಾಡಬೇಕು ಮತ್ತು ಅವರ ಸಲಹೆಗಳನ್ನು ಪಡೆದು ಮುಂದುವರಿಯಬೇಕು ಎಂಬ ಐಐಐಟಿ-ಬಿ ನಿರ್ದೇಶಕ ಪ್ರೊ. ಎಸ್ .ಸಡಗೋಪನ್ ಅವರ ಅಭಿಪ್ರಾಯವನ್ನು ಟಿಸಿಎಸ್‌ನ ಕೆ. ಅನಂತಕೃಷ್ಣನ್ ಬೆಂಬಲಿಸಿದರು.

ಐಐಟಿ ಹೈದ್ರಾಬಾದ್ ನ ಪ್ರೊ. ಉದಯ್ ದೇಸಾಯಿ ಅವರ ಆಸಕ್ತಿಯಿಂದ ಪಿಯು ಹಂತದಲ್ಲಿ ಕೃತಕ ಬುದ್ದಿಮತ್ತೆಯ ಡೇಟಾ ಸೈನ್ಸ್ ಪಠ್ಯವನ್ನು ಪರಿಚಯಿಸಲಾಗಿದೆ. ಐಐಟಿ ಮದ್ರಾಸ್ ಇನ್ನು ಕೆಲವೇ ವರ್ಷಗಳಲ್ಲಿ ಕೃತಕ ಬುದ್ದಿಮತ್ತೆಯ ಸಾವಿರಾರು ಪದವೀಧರರನ್ನು ಸಿದ್ಧಗೊಳಿಸಲಿದೆ. ಐಐಎಂ ಎಂಬಿಎಯಲ್ಲಿ ಡೇಟಾ ಅನಾಲೆಟಿಕ್ಸ್ ಕೋರ್ಸ್ ಆರಂಭಿಸಿದೆ.
- ಪ್ರೊ. ಎಸ್ ಸಡಗೋಪನ್, ನಿರ್ದೇಶಕರು ಐಐಐಟಿಬಿ

**
ಇನ್ನು ಎರಡು-ಮೂರು ವರ್ಷಗಳಲ್ಲಿ ಕೃತಕ ಬುದ್ದಿಮತ್ತೆ, ಆಟೋಮೇಶನ್, ಮಷೀನ್ ಲರ್ನಿಂಗ್ ಮುಂತಾದ ತಂತ್ರಜ್ಞಾನಗಳಿಂದ ವಿವಿಧ ಕ್ಷೇತ್ರಗಳಲ್ಲಿ ಶೇಕಡಾ 30-40ರಷ್ಟು ದಕ್ಷತೆ ಹೆಚ್ಚಾಗಲಿದೆ.
- ಕೆ. ಅನಂತಕೃಷ್ಣನ್, ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ. ಟಿಸಿಎಸ್

**
ಕೃತಕ ಬುದ್ದಿಮತ್ತೆಯು ನ್ಯಾಯಾಂಗ ಸೇರಿದಂತೆ ಒಟ್ಟಾರೆ ಸಾರ್ವಜನಿಕ ವ್ಯವಸ್ಥೆಯಲ್ಲಿ ತ್ವರಿತ ಕಾರ್ಯಗಳಿಗೆ ಪೂರಕವಾಗಿ ದಾಖಲೆ ವೇಗದಲ್ಲಿ ಕೆಲಸ ಮಾಡಲು ನೆರವಾಗಲಿದೆ.
-ವಿವೇಕ್ ರಾಘವನ್, ಮುಖ್ಯ ಉತ್ಪನ್ನ ವ್ಯವಸ್ಥಾಪಕ ಮತ್ತು ಬಯೋಮೆಟ್ರಿಕ್ ಆರ್ಕಿಟೆಕ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.