ADVERTISEMENT

ಬೆಂಕಿ ಹಚ್ಚಿದ್ದು ಎಸ್‌ಡಿಪಿಐ ಕಾರ್ಯಕರ್ತರು; 317 ಮಂದಿ ವಿರುದ್ಧ ಎಫ್‌ಐಆರ್

ಮಾರಕಾಸ್ತ್ರ ಜತೆ ಬಂದಿದ್ದ ಆರೋಪಿಗಳು * ಪಿಎಸ್ಐ, ಕಾನ್‌ಸ್ಟೆಬಲ್ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 21:53 IST
Last Updated 13 ಆಗಸ್ಟ್ 2020, 21:53 IST
ಹಾನಿಗೊಂಡಿರುವ ಮನೆಯನ್ನು ತೋರಿಸುತ್ತಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ
ಹಾನಿಗೊಂಡಿರುವ ಮನೆಯನ್ನು ತೋರಿಸುತ್ತಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ   

ಬೆಂಗಳೂರು: ‘ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ಮಂಗಳವಾರ ರಾತ್ರಿ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆಗೆ ನುಗ್ಗಿ ಗಲಭೆ ಸೃಷ್ಟಿಸಿದ್ದು ಎಸ್‌ಡಿಪಿಐ ಕಾರ್ಯಕರ್ತರು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಇದ್ದ ಕಾವಲ್‌ ಭೈರಸಂದ್ರ, ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ಪ್ರತ್ಯೇಕವಾಗಿ ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದರು. ಮೂರು ಕಡೆಯ ಗಲಭೆ ಬಗ್ಗೆ ಪೊಲೀಸರು, ಆಯಾ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಕೆ.ಜಿ. ಹಳ್ಳಿ ಠಾಣೆ ಮೇಲೆ ದಾಳಿ ಹಾಗೂ ಠಾಣೆ ಎದುರು ವಾಹನಗಳನ್ನು ಸುಟ್ಟ ಪ್ರಕರಣ ಸಂಬಂಧ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರಾದ ಅಬ್ಬಾಸ್, ಫಿರೋಜ್, ಮುಜಾಮ್ಮಿಲ್ ಪಾಷ, ಹಬೀಬ್, ಪೀರ್ ಪಾಷ, ಜಿಯಾ, ಖಲೀಂ, ಕರ್ಚಿಫ್ ಸಾದಿಕ್, ಜಾವೇದ್, ಮುಜ್ಜು ಸೇರಿದಂತೆ 17 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಠಾಣೆ ಇನ್‌ಸ್ಪೆಕ್ಟರ್ ಅಜಯ್ ಸಾರಥಿ ದೂರು ನೀಡಿದ್ದರು.

ADVERTISEMENT

ಡಿ.ಜೆ.ಹಳ್ಳಿ ಠಾಣೆಯಲ್ಲಿ ಗಲಭೆ: ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋ‍ಪದಡಿ ಎಸ್‌ಡಿಪಿಐ ಮುಖಂಡರು ಸೇರಿದಂತೆ 300 ಮಂದಿ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.

ಶಿವಾಜಿನಗರದ ಅಫ್ನಾನ್, ಮುಜಾಮ್ಮಿಲ್ ಪಾಷ, ಸೈಯದ್ ಮಸೂದ್, ಅಯಾಜ್, ಅಲ್ಲಾಭಕ್ಷ, ಜಾಫರ್, ವಾಜೀದ್ ಪ್ರಮುಖ ಆರೋಪಿಗಳು. ಗುಂಪು ಕಟ್ಟಿಕೊಂಡು ಠಾಣೆಗೆ ನುಗ್ಗಿದ್ದ ಅವರು, ಪೊಲೀಸರ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಯತ್ನಿಸಿದ್ದರು. ಠಾಣೆ ಕಟ್ಟಡದ ಗಾಜು ಒಡೆದರು. ಕಾರು ಹಾಗೂ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ನಂತರ ಗಲಭೆ ಸೃಷ್ಟಿಸಿದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಠಾಣೆಗೆ ನುಗ್ಗಿದ ವೇಳೆ ಆರೋಪಿಗಳು, ಇನ್‌ಸ್ಪೆಕ್ಟರ್ ಕೇಶವಮೂರ್ತಿ, ಠಾಣೆ ಸಿಬ್ಬಂದಿ ಶ್ರೀಧರ್ ಹಾಗೂ ಹಲವರ ಮೇಲೆ ಹಲ್ಲೆ‌ ನಡೆಸಿದ್ದಾರೆ. ಘಟನೆ ಬಗ್ಗೆ ಕೇಶವಮೂರ್ತಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಗಲಾಟೆ ವೇಳೆ ಠಾಣೆಯಲ್ಲಿದ್ದ ನವೀನ್
ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಎದುರಿಸುತ್ತಿರುವ ನವೀನ್ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿದ್ದ ಅಲ್ಲಿಯ ಪೊಲೀಸರು, ತಮ್ಮ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕೆ.ಜಿ.ಹಳ್ಳಿ ಠಾಣೆಗೆ ಆತನನ್ನು ಕರೆದೊಯ್ದಿದ್ದರು.

ಅದು ಗೊತ್ತಾಗುತ್ತಿದ್ದಂತೆ ಆರೋಪಿಗಳು, ಗುಂಪು ಕಟ್ಟಿಕೊಂಡು ಮಾರಕಾಸ್ತ್ರ ಸಮೇತ ರಾತ್ರಿ 11 ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಠಾಣೆ ಎದುರು ಸೇರಿದ್ದರು. ‘ನವೀನ್‌ನನ್ನು ನಮ್ಮ ವಶಕ್ಕೆ ಕೊಡಿ. ನಾವೇ ಪಾಠ ಕಲಿಸುತ್ತೇವೆ’ ಎಂದು ಕೂಗಾಡಿದ್ದರು.

‘ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಇಲ್ಲಿಂದ ಹೊರಟು ಹೋಗಿ’ ಎಂದು ಪೊಲೀಸರು ಹೇಳಿದ್ದರು. ಅದಕ್ಕೆ ಒಪ್ಪದ ಆರೋಪಿಗಳು, ‘ನವೀನ್‌ನನ್ನು ಕೊಲ್ಲಲು ಪೊಲೀಸರು ಬಿಡುತ್ತಿಲ್ಲ. ಇವರಿಗೆ ಒಂದು ಗತಿ ಕಾಣಿಸಿ’ ಎಂದು ಪೊಲೀಸರ ವಿರುದ್ಧವೇ ಘೋಷಣೆ ಕೂಗಿ ಠಾಣೆಗೆ ನುಗ್ಗಿದರು. ತಡೆಯಲು ಬಂದ ಪಿಎಸ್ಐ ರಾಜೇಶ್ ಹಾಗೂ ಕಾನ್‌ಸ್ಟೆಬಲ್ ಮಂಜುನಾಥ್ ಮೇಲೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಗಲಭೆ ಸೃಷ್ಟಿಯಾಯಿತು.

ಉದ್ರಿಕ್ತರು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಠಾಣೆ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಗಲಭೆ ದೊಡ್ಡದಾಗುತ್ತಿದ್ದಂತೆ ಪೊಲೀಸರು ಗುಂಡು ಹಾರಿಸಿದರು. ಗುಂಡೇಟು ತಗುಲಿ ಒಬ್ಬ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ. ನಂತರ ಗುಂಪು ಚದುರಿತು. ಈ ಸಂಗತಿಯನ್ನು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅನುಮಾನಕ್ಕೆ ಕಾರಣವಾದ ಪೋಸ್ಟ್‌
ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದ ಆರೋಪದಡಿ ಪೊಲೀಸರು ಬಂಧಿಸಿರುವ ಪಿ. ನವೀನ್, ಗುರುವಾರವೂ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಬೇರೊಬ್ಬರ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾನೆ. ಇದು ಅನುಮಾನಕ್ಕೆ ಕಾರಣವಾಗಿದೆ.

‘ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಪ್ರಕಟಿಸಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಪಿರ್ದೋಷ್ ಪಾಷ ಎಂಬುವರು ದೂರು ನೀಡಿದ್ದರು. ಅದರನ್ವಯ ನವೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಡಿ.ಜೆ.ಹಳ್ಳಿ ಪೊಲೀಸರು, ಮಂಗಳವಾರ ರಾತ್ರಿ ಆತನನ್ನು ಬಂಧಿಸಿದ್ದರು.

‘ನನ್ನ ಮೊಬೈಲ್ ಮೂರು ದಿನಗಳ ಹಿಂದೆಯೇ ಕಳೆದು ಹೋಗಿದೆ. ನನ್ನ ಫೇಸ್‌ಬುಕ್‌ ಖಾತೆಯೂ ಹ್ಯಾಕ್ ಹಾಗಿದೆ’ ಎಂದು ನವೀನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆತನ ತಾಯಿ ಸಹ ಅದನ್ನೇ ಹೇಳುತ್ತಿದ್ದಾರೆ.

ಇದರ ನಡುವೆಯೇ, ಬಿಜೆಪಿ ಮುಖಂಡ ಮುರುಗೇಶ್‌ ನಿರಾಣಿ ಅವರು ದೇವರ ಬಗ್ಗೆ ಹೇಳಿಕೆ ನೀಡಿದ್ದರು ಎನ್ನಲಾದ ಪೋಸ್ಟ್‌ ನವೀನ್ ಖಾತೆಯಿಂದ ಶೇರ್ ಆಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, ‘ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ’ ಎಂದರು.

‘ಪೊಲೀಸ್‌ ಕಸ್ಟಡಿಯಲ್ಲಿರುವ ನವೀನ್‌ ಮೊಬೈಲ್ ಬಳಕೆ ಮಾಡುತ್ತಿದ್ದಾನಾ ಅಥವಾ ಆತನ ಹೆಸರಿನಲ್ಲಿ ಬೇರೆ ಯಾರಾದರೂ ಖಾತೆ ನಿರ್ವಹಣೆ ಮಾಡುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚಬೇಕಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.