
ಬೆಂಗಳೂರು: ‘ನಗರದಲ್ಲಿ ಎಂಟು ವರ್ಷಗಳಿಂದ ಸರಿಯಾಗಿ ಕಸ ಎತ್ತುವುದಕ್ಕೆ ಆಗುತ್ತಿಲ್ಲ. ಏನನ್ನಾದರೂ ಮಾಡಲು ಹೊರಟರೆ ಎಲ್ಲದಕ್ಕೂ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರೆ. ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಮೊತ್ತದಲ್ಲಿ ವರ್ಷವೊಂದಕ್ಕೆ ₹2 ಸಾವಿರ ಕೋಟಿ ನಷ್ಟವಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.
ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ಆವರಣದಲ್ಲಿನ ಪ್ರಧಾನ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ನ್ಯಾಯಮಿತ್ರ ಸಹಕಾರಿ ಬ್ಯಾಂಕ್’ ಬೆಳ್ಳಿಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ವಕೀಲರು ಕೂಡಾ ಅಭಿವೃದ್ಧಿಯ ದೃಷ್ಟಿಯಿಂದ ಯೋಚನೆ ಮಾಡಬೇಕು. ಇಂತಹ ವಿಷಯಗಳನ್ನು ಹೊತ್ತು ತಮ್ಮ ಬಳಿ ಬರುವ ಕಕ್ಷಿದಾರರನ್ನು ತಿದ್ದಬೇಕು’ ಎಂದು ಅವರು ವಕೀಲರಿಗೆ ಮನವಿ ಮಾಡಿದರು.
‘ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ನಾವೇನಾದರೂ ಬೃಹತ್ ಯೋಜನೆಗಳನ್ನು ಜಾರಿಗೆ ತರಲು ಮುಂದಾದರೆ, ದುಡ್ಡು ಬಾಚೋಕೆ ಮಾಡುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ. ಹಾಗಿದ್ದರೆ, ನಿಮಗೆ ಅವಕಾಶ ಇದ್ದಾಗ ಯಾಕೆ ಇಂತಹ ಅಭಿವೃದ್ಧಿ ಕೆಲಸ ಮಾಡಲು ಮುಂದಾಗಲಿಲ್ಲ’ ಎಂದು ವಿರೋಧ ಪಕ್ಷಗಳು ಮತ್ತು ಟೀಕಾಕಾರರನ್ನು ಪ್ರಶ್ನಿಸಿದರು.
‘ನಾನು ಬೆಂಗಳೂರು ಮಂತ್ರಿ ಇದ್ದೇನೆ. ಇಲ್ಲಿನ ಸಮಸ್ಯೆ ನನಗೆ ಗೊತ್ತಿದೆ. ಸದ್ಯದ ನಗರದ ಜನಸಂಖ್ಯೆ 1.40 ಕೋಟಿ ಇದೆ. 1.30 ಕೋಟಿ ವಾಹನಗಳಿವೆ. ದಿನಾಲೂ 70 ಲಕ್ಷ ಜನರು ಇಲ್ಲಿಗೆ ಬಂದು ಹೋಗುತ್ತಾರೆ. ಹೀಗಿರುವಾಗ ನಗರದಲ್ಲಿ ಜಾಗ ಎಲ್ಲಿದೆ’ ಎಂದು ಕೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಮಾತನಾಡಿ, ‘ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಕಾಲಮಿತಿ ವಿಧಿಸಿ ಪ್ರಕರಣಗಳನ್ನು ವಿಲೇವಾರಿ ಮಾಡಲು ನಿರ್ದೇಶಿಸುವ ಸುಪ್ರೀಂ ಕೋರ್ಟ್ ನಿರ್ದೇಶನದಿಂದ ಇತರೆ ತುರ್ತು ಪ್ರಕರಣಗಳು ಸೊರಗುತ್ತವೆ’ ಎಂದರು.
‘ನಾನು ಈ ಕೋರ್ಟ್‌ನಿಂದಲೇ ನನ್ನ ವೃತ್ತಿ ಆರಂಭಿಸಿದ್ದು ಎಂಬ ಹೆಗ್ಗಳಿಕೆ ನನ್ನದು. ವಕೀಲರು ತಮ್ಮ ಸಂಪಾದನೆಯ ಒಂದು ಭಾಗವನ್ನು ನಿಶ್ಚಿತ ಠೇವಣಿ ಇರಿಸುವ ಮೂಲಕ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ‘ಹೈಕೋರ್ಟ್‌ನಲ್ಲಿ ಜಾಗದ ಕೊರತೆಯಿದ್ದು ಆಧುನಿಕ ಹೈಕೋರ್ಟ್ ನಿರ್ಮಾಣಕ್ಕಾಗಿ 20 ಎಕರೆ ಜಮೀನನ್ನು ಟರ್ಫ್ ಕ್ಲಬ್ ಅಥವಾ ಇನ್ನಾವುದಾದರೂ ಸೂಕ್ತ ಜಾಗದಲ್ಲಿ ಒದಗಿಸಬೇಕು. ಅಂತೆಯೇ, ಸಿಟಿ ಸಿವಿಲ್ ಕೋರ್ಟ್‌ಗೆ 10 ಅಂತಸ್ತುಗಳ ಹೊಸ ಕಟ್ಟಡ ಮಾಡಿಸಿಕೊಡಬೇಕು’ ಎಂದು ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದರು.
ಮುಂದಿನ ಮುಖ್ಯಮಂತ್ರಿಗೆ ಜೈ...
ಡಿ.ಕೆ.ಶಿವಕುಮಾರ್ ತಮ್ಮ ಭಾಷಣ ಮುಗಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಸಭಿಕರ ಮಧ್ಯದಿಂದ ‘ಮುಂದಿನ ಮುಖ್ಯಮಂತ್ರಿ ಶಿವಕುಮಾರ್‌ಗೆ ಜೈ’ ಎಂಬ ಜೈಕಾರಗಳು ಮೊಳಗಿದವು. ವೇದಿಕೆಯಿಂದ ಕೆಳಗಿಳಿಯುವ ವೇಳೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ ಅವರೂ ‘ಮುಂದಿನ ಮುಖ್ಯಮಂತ್ರಿ ಶಿವಕುಮಾರ್‌ಗೆ ಜೈ’ ಎಂದು ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.