ಎಂ.ಬಿ. ಪಾಟೀಲ
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಬೆಂಗಳೂರು ಸಮೀಪ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಎರಡು ಸ್ಥಳಗಳನ್ನು ಅಂತಿಮಗೊಳಿಸಲಾಗಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇದೇ ತಿಂಗಳು ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಹಾಗೂ ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದದ ಪ್ರಕಾರ, ಕೆಂಪೇಗೌಡ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ 2033ರವರೆಗೆ ಯಾವುದೇ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ. ಆದರೆ, ಭೂಸ್ವಾಧೀನ ಪ್ರಕ್ರಿಯೆ, ಅನುಮತಿ, ವಿಮಾನ ನಿಲ್ದಾಣ ಕಾಮಗಾರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈಗಲೇ ಪ್ರಕ್ರಿಯೆ ಆರಂಭಿಸಿದರೆ 2033ರ ವೇಳೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಬಹುದು. ಹೀಗಾಗಿ, ಕೆಲವು ತಿಂಗಳ ಹಿಂದೆಯೇ ಸ್ಥಳ ಗುರುತಿಸುವ ಕೆಲಸ ಆರಂಭಿಸಲಾಗಿತ್ತು’ ಎಂದರು.
‘ಉದ್ಯಮಿಗಳಿಗೆ, ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸ್ಥಳದಲ್ಲೇ ವಿಮಾನ ನಿಲ್ದಾಣ ನಿರ್ಮಿಸಬೇಕು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೂಡಿಕೆ ಮಾಡುವ ಕಂಪನಿಗೂ ಅನುಕೂಲವಾಗಬೇಕು. ಹೀಗಾಗಿ, ಬೆಂಗಳೂರಿಂದ 50 ಕಿ.ಮೀಗೂ ಹೆಚ್ಚು ದೂರ ಇರಬಾರದು ಎಂಬುದು ಸರ್ಕಾರದ ನಿಲುವು. ಅಂತಿಮವಾಗಿ ಯಾವ ಸ್ಥಳ ಸೂಕ್ತ ಎನ್ನುವುದನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತೀರ್ಮಾನಿಸುತ್ತವೆ’ ಎಂದು ಹೇಳಿದರು.
ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಏಳು ಸ್ಥಳಗಳಲ್ಲಿ ಪ್ರಾಥಮಿಕ ಪರಿಶೀಲನಾ ಕಾರ್ಯ ನಡೆಸಲಾಗಿತ್ತು. ಮೂಲಗಳ ಪ್ರಕಾರ ಅಂತಿಮವಾಗಿ ನೆಲಮಂಗಲ, ಕನಕಪುರ ರಸ್ತೆಯ ಬಳಿ ಸ್ಥಳ ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.