ಬೆಂಗಳೂರು: ‘ಬೆಟ್ಟಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಬಿಹಾರ ಚುನಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ₹300 ಕೋಟಿ ಕೊಟ್ಟು ಮಂತ್ರಿ ಸ್ಥಾನಗಿಟ್ಟಿಸಲು ಪ್ರಯತ್ನಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಹುಲ್‌ಗಾಂಧಿ ಅವರ ಪಾಲಿಗೆ ಎಟಿಎಂ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ’ ಎಂದು ಅವರು ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
‘ವೀರೇಂದ್ರ ಕರ್ಮಕಾಂಡ ನೋಡುತ್ತಿದ್ದರೆ ಇನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್‌ಗೆ ಕಪ್ಪ ನೀಡುತ್ತಿರಬಹುದು ನೀವೇ ಊಹಿಸಿಕೊಳ್ಳಿ’ ಎಂದು ಹೇಳಿದ್ದಾರೆ.
‘ಒಂದು ಕಡೆ ಜನರಿಗೆ ಕ್ಯಾಸಿನೊ, ಜೂಜು, ಬೆಟ್ಟಿಂಗ್ ಆಡಿಸಿ ಬಡವರ ಮನೆ ಹಾಳು ಮಾಡಿ ಅಡ್ಡ ದಾರಿಯಲ್ಲಿ ದುಡ್ಡು ಮಾಡುವುದು. ಆ ಪಾಪದ ಹಣದಲ್ಲಿ ಟಿಕೆಟ್ ಪಡೆದು, ಚುನಾವಣೆ ಎದುರಿಸಿ, ಹೈಕಮಾಂಡ್‌ಗೆ ಕಪ್ಪ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವುದು. ಆ ಮೇಲೆ ಮಂತ್ರಿಗಿರಿ ಬಳಸಿಕೊಂಡು ಇನ್ನಷ್ಟು ಲೂಟಿ ಮಾಡುವುದು. ಇದು ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಹೆಣೆದಿರುವ ವಿಷ ವರ್ತುಲ’ ಎಂದು ದೂರಿದ್ದಾರೆ.
‘ತೆಲಂಗಾಣ ವಿಧಾನಸಭೆ ಚುನಾವಣೆಗೆ, ಲೋಕಸಭಾ ಚುನಾವಣೆಗೆ ರಾಜ್ಯದ ವಾಲ್ಮೀಕಿ ನಿಗಮದ ಹಣ ಸೇರಿ ಸಾವಿರಾರು ಕೋಟಿ ಲಪಟಾಯಿಸಲಾಗಿದೆ. ಈಗ ಬಿಹಾರ ಚುನಾವಣೆಗೆ ಕನ್ನಡಿಗರ ತೆರಿಗೆ ಹಣ ಇನ್ನೆಷ್ಟು ಲೂಟಿ ಆಗುತ್ತದೆಯೋ ಗೊತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.