
ಉಡುಪಿ: ‘ಭಗವಾಧ್ವಜ ಹಾರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿರುವ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾದರೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಸಿದ್ದಾರೆ.
‘ಈ ಬೆಳವಣಿಗೆಗಳಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಜಿಲ್ಲೆಯ ಬಗ್ಗೆ ತೋರಿದ ನಿರ್ಲಕ್ಷ್ಯ ಧೋರಣೆಯೇ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರ್ಕಾರದ ಪ್ರತಿನಿಧಿಗಳು ಉಡುಪಿಯ ಪರ್ಯಾಯ ಶೋಭಾಯಾತ್ರೆಗೆ ಚಾಲನೆ ನೀಡುವುದು ಸಂಪ್ರದಾಯ. ಸಚಿವೆ ಈ ಬಾರಿಯ ಪರ್ಯಾಯ ಮಹೋತ್ಸವದ ಬಗ್ಗೆ ಒಂದೇ ಒಂದು ಪೂರ್ವ ಸಿದ್ಧತಾ ಸಭೆಯನ್ನೂ ನಡೆಸಲಿಲ್ಲ’ ಎಂದು ಅವರು ಹೇಳಿದ್ದಾರೆ.
ನಿರ್ಲಿಪ್ತವಾಗಿರಬೇಕಿತ್ತು: ‘ಪರ್ಯಾಯ ಮೆರಣಿಗೆಗೆ ಚಾಲನೆ ನೀಡುವಾಗ ಜಿಲ್ಲಾಧಿಕಾರಿ ಅವರು ನಿರ್ಲಿಪ್ತವಾಗಿರಬೇಕಿತ್ತು. ಜಿಲ್ಲಾಧಿಕಾರಿಯಿಂದ ಯಾವ ಕೆಲಸ ಮಾಡಿಸಬೇಕು ಎಂಬುದು ಶಾಸಕ ಯಶ್‌ಪಾಲ್ ಸುವರ್ಣ ಅವರಿಗೂ ತಿಳಿದಿರಬೇಕಿತ್ತು’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.
‘ಹಿಂದೆ ಸಿಡಿಮದ್ದು ಸಿಡಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಈ ಸಲ ಜಿಲ್ಲಾಧಿಕಾರಿ ಅವರು ಭಗವಾಧ್ವಜ ಹಾರಿಸಿ ಚಾಲನೆ ನೀಡಿದ್ದಾರೆ. ಈ ಬಾರಿ ಮುಸ್ಲಿಮರು ಪರ್ಯಾಯಕ್ಕೆ ಹೊರೆಕಾಣಿಕೆ ಕೊಡುತ್ತೇವೆ ಅಂದಾಗ ಶಾಸಕರು ನಿರಾಕರಿಸಿದ್ದರು. ಸರ್ಕಾರ ಪರ್ಯಾಯಕ್ಕಾಗಿ ₹6 ಕೋಟಿ ಬಿಡುಗಡೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.