ADVERTISEMENT

‘ಮೂರು ಮಕ್ಕಳನ್ನು ಮಾಡಿಕೊಳ್ಳಿ’ ಎಂಬ ಭಾಗವತ್‌ ಹೇಳಿಕೆ ದೇಶಕ್ಕೆ ಮಾರಕ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 14:21 IST
Last Updated 30 ಆಗಸ್ಟ್ 2025, 14:21 IST
ಎಚ್.ಸಿ.ಮಹದೇವಪ್ಪ  
ಎಚ್.ಸಿ.ಮಹದೇವಪ್ಪ     

ಬೆಂಗಳೂರು: ‘ಮೂರು ಮಕ್ಕಳನ್ನು ಮಾಡಿಕೊಳ್ಳಿ’ ಎನ್ನುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಸಲಹೆ ದೇಶದ ಬೆಳವಣಿಗೆಗೆ ಮಾರಕ ಎಂದು ಸಮಾಜಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನಸಂಖ್ಯೆ ರಾಷ್ಟ್ರೀಯ ಸಂಪನ್ಮೂಲವಾಗಿದ್ದರೂ ಜನಸಂಖ್ಯಾ ಸ್ಫೋಟ ರಾಷ್ಟ್ರೀಯ ವಿಪತ್ತಿಗೆ ಕಾರಣವಾಗುತ್ತದೆ. ಜನಸಂಖ್ಯೆಯ ನಿಯಂತ್ರಣಕ್ಕೆ 1951ರ ಪಂಚವಾರ್ಷಿಕ ಯೋಜನೆಯ ಅವಧಿಯಿಂದಲೂ ಜಾಗೃತಿ ಮೂಡಿಸುತ್ತಾ ಬರಲಾಗಿದೆ. 1993ರ ಎಂ.ಎಸ್‌.ಸ್ವಾಮಿನಾಥನ್‌ ಅವರ ರಾಷ್ಟ್ರೀಯ ಜನಸಂಖ್ಯಾ ನೀತಿ, 1997ರ ಕುಟುಂಬ ಕಲ್ಯಾಣ ಯೋಜನೆಗಳ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರಗಳು ಹಲವು ಕಾರ್ಯಕ್ರಮ ರೂಪಿಸಿವೆ ಎಂದಿದ್ದಾರೆ.

ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ದೇಶದ ಜನರ ತಲಾ ಆದಾಯ ಕುಗ್ಗುತ್ತದೆ, ಅಪೌಷ್ಟಿಕತೆ ಹೆಚ್ಚಾಗುತ್ತದೆ, ಸಾಕ್ಷರತೆಯ ಪ್ರಮಾಣವು ಕುಂಠಿತವಾಗುವ ಸಂಭವ ಇರುತ್ತದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಮೂಲ ಸೌಕರ್ಯಗಳನ್ನು ಜನರಿಗೆ ಸಮರ್ಪಕವಾಗಿ ಒದಗಿಸಲು ಕಷ್ಟವಾಗುತ್ತದೆ. ಭಾರತದ ಜನಸಂಖ್ಯೆ ವಿಶ್ವದಲ್ಲೇ ಅಧಿಕವಾಗಿದೆ. ಇಂತಹ ಕಾಲಘಟ್ಟದಲ್ಲಿ ಜಾತಿ, ಧರ್ಮಗಳನ್ನು ಮೀರಿ ಜನರಿಗೆ ಕುಟುಂಬ ಕಲ್ಯಾಣ ಸೂತ್ರಗಳನ್ನು ಮನವರಿಕೆ ಮಾಡಿಸಬೇಕು. ಮೂರು ಮಕ್ಕಳನ್ನು ಪಡೆಯಬೇಕು ಎಂಬ ಸಲಹೆ ಭಾರತದಂತಹ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ತೊಡಕಾಗುತ್ತದೆ ಎಂದು ಹೇಳಿದ್ದಾರೆ. 

ADVERTISEMENT

‘ಎಲ್ಲವನ್ನೂ ಧರ್ಮದ ಕಣ್ಣಲ್ಲಿ ನೋಡುತ್ತಾ, ದೇಶವನ್ನು ಮೌಢ್ಯತೆ ಮತ್ತು ಅವೈಜ್ಞಾನಿಕತೆಯ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವಿವೇಕದ ಸಲಹೆಗಳನ್ನು ನೀಡುತ್ತಿದ್ದಾರೆ. ಜನಸಂಖ್ಯಾ ನಿಯಂತ್ರಣವು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಎನ್ನದೇ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಇರಬೇಕಾದ ರಾಷ್ಟ್ರೀಯ ತಿಳಿವಳಿಕೆ. ಈ ಬಗ್ಗೆ ಎಲ್ಲರೂ ವಿವೇಕಪೂರ್ಣವಾಗಿ ನಿರ್ಧರಿಸಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.