ADVERTISEMENT

ಭಾನುರೇಖಾ ಸಾವಿನ ಪ್ರಕರಣ; ಅಂಡರ್‌ಪಾಸ್‌ ಪರಿಶೀಲಿಸಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 3:16 IST
Last Updated 8 ಜೂನ್ 2023, 3:16 IST
   

ಬೆಂಗಳೂರು: ಮೇ 21ರಂದು ನಗರದಲ್ಲಿ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಕಾರು ಮುಳುಗಿ ಭಾನುರೇಖಾ ಎಂಬ ಯುವತಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಲೋಕಾಯುಕ್ತ ಪೊಲೀಸರು, ದುರ್ಘಟನೆಗೆ ಕಾರಣವಾದ ಕೆ.ಆರ್‌. ವೃತ್ತದ ಅಂಡರ್‌‍ಪಾಸ್‌ಗೆ ಬುಧವಾರ ಭೇಟಿನೀಡಿ ಪರಿಶೀಲಿಸಿದರು.

ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಆದೇಶಿಸಿದ್ದರು. ಲೋಕಾಯುಕ್ತದ ಐಜಿಪಿ ಡಾ.ಸುಬ್ರಮಣ್ಯೇಶ್ವರ ರಾವ್‌ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಕೆ.ಆರ್‌. ವೃತ್ತದ ಅಂಡರ್‌ಪಾಸ್‌ಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿತು.

ಲೋಕಾಯುಕ್ತದ ತಾಂತ್ರಿಕ ವಿಭಾಗದ ಎಂಜಿನಿಯರ್‌ಗಳೊಂದಿಗೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಲಾಯಿತು. ಬಿಬಿಎಂಪಿಯ ಮಳೆ ನೀರು ಕಾಲುವೆ ವಿಭಾಗದ ಅಧಿಕಾರಿಗಳು ಹಾಗೂ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರಿಂದ ವಿವರಣೆ ಪಡೆಯಲಾಯಿತು. ಟ್ಯಾಂಕರ್‌ನಲ್ಲಿ ನೀರು ತರಿಸಿ ಅಂಡರ್‌ಪಾಸ್‌ನ ಕಾಲುವೆಯಲ್ಲಿ ಹರಿಸಿ, ಪರೀಕ್ಷಿಸಲಾಯಿತು.

ADVERTISEMENT

‘ದುರ್ಘಟನೆ ಸಂಭವಿಸಿದ ದಿನ ಅಂಡರ್‌ಪಾಸ್‌ನಲ್ಲಿ ಬೃಹತ್‌ ಪ್ರಮಾಣದ ನೀರು ಸಂಗ್ರಹ ಆಗಲು ಕಾರಣ, ಮಳೆನೀರು ಅಂಡರ್‌ಪಾಸ್‌ನಲ್ಲಿ ನಿಲ್ಲದಂತೆ ಕೈಗೊಂಡಿದ್ದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಕೆ.ಆರ್‌. ವೃತ್ತದ ಅಂಡರ್‌ಪಾಸ್‌ ಮಾತ್ರವಲ್ಲ ನಗರದ ಯಾವುದೇ ಅಂಡರ್‌ಪಾಸ್‌ನಲ್ಲೂ ಸರಿಯಾದ ನಿರ್ವಹಣೆ ಇಲ್ಲ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ’ ಎಂದು ಮೂಲಗಳು ತಿಳಿಸಿವೆ.

ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಲ್ಲುವುದನ್ನು ತಡೆಯಲು ಕಾಲುವೆಗಳಲ್ಲಿ ಹೂಳು ತೆಗೆಯಬೇಕಿತ್ತು. ಅಂಡರ್‌ಪಾಸ್‌ ಮತ್ತು ಅವುಗಳಿಗೆ ಹೊಂದಿಕೊಂಡ ಕಾಲುವೆಗಳಲ್ಲಿ ಹೂಳು ತೆಗೆದಿಲ್ಲ ಎಂಬ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ. ಮಳೆಗಾಲಕ್ಕೂ ಮೊದಲು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ.

‘ಕೆ.ಆರ್‌. ವೃತ್ತದ ಅಂಡರ್‌ಪಾಸ್‌ನಲ್ಲಿ ದುರ್ಘಟನೆ ಸಂಭವಿಸಲು ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದೇವೆ. ಅದರ ಜತೆಯಲ್ಲೇ ಇತರ ಅಂಡರ್‌ಪಾಸ್‌ಗಳ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಕರ್ತವ್ಯಲೋಪದ ಕುರಿತು ಬಿಬಿಎಂಪಿ ಹಿರಿಯ ಅಧಿಕಾರಿಗಳಿಂದ ವಿವರಣೆ ಪಡೆಯಲಾಗುವುದು’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.