ADVERTISEMENT

ಶುರುವಾಗಿವೆ ಪ್ರತಿಭಟನೆಗಳು, ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 5:16 IST
Last Updated 8 ಜನವರಿ 2019, 5:16 IST
ಬಳ್ಳಾರಿಯಲ್ಲಿ ಮುಷ್ಕರದ ಬಿಸಿಯೇರುತ್ತಿದೆ
ಬಳ್ಳಾರಿಯಲ್ಲಿ ಮುಷ್ಕರದ ಬಿಸಿಯೇರುತ್ತಿದೆ   

ಬೆಂಗಳೂರು:ಮೋಟಾರು ವಾಹನ (ತಿದ್ದುಪಡಿ) ಮಸೂದೆಯನ್ನು ಹಿಂಪಡೆಯಬೇಕು ಹಾಗೂ ಅಸಂಘಟಿತ ವಲಯದ ಸಾರಿಗೆ ಕಾರ್ಮಿಕರಿಗೆ ಸುರಕ್ಷತಾ ಕಾಯಿದೆ ಜಾರಿಗೊಳಿಸಬೇಕು ಎಂಬುವೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಭಾರತ ಬಂದ್‌ಗೆ ಕರೆ ನೀಡಿದ್ದು, ಕೆಲವೆಡೆ ಸಾಂಕೇತಿಕ ಪ್ರತಿಭಟನೆಗಳು ನಡೆಯುತ್ತಿವೆ.

ಕೋಲಾರ, ಬಳ್ಳಾರಿ, ಗದಗದಲ್ಲಿ ಬೆಳಿಗ್ಗೆಯೇ ರಸ್ತೆಗಳಿದಿರುವ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರುಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾರವಾರದಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲು ಸಿಐಟಿಯು ಕಾರ್ಯಕರ್ತರಿಂದ ಒತ್ತಾಯ.

ADVERTISEMENT

ಬಳ್ಳಾರಿಯಲ್ಲಿ ಬಿಸಿಯೇರುತ್ತಿರುವ ಮುಷ್ಕರ. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ನಗರದಲ್ಲಿ ಬೈಕ್ ರ್್ಯಾಲಿ ನಡೆಸಿದರು‌. ಗಡಿಗಿ‌ ಚೆನ್ನಪ್ಪ ವೃತ್ತದಲ್ಲಿ ಟೈರ್ ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಪೆಂಡಾಲ್ ಅಳವಡಿಸಿದರು. ನಗರದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ಮುಂದೆ ಕೆಲಕಾಲ ಧರಣಿ‌ ನಡೆಸಿದರು.

ಮಂಗಳೂರಿನಲ್ಲಿ ಬಸ್, ಆಟೊರಿಕ್ಷಾಗಳು ಎಂದಿನಂತೆ ಓಡಾಡುತ್ತಿವೆ. ಅಂಗಡಿಗಳು ಬಾಗಿಲು ತೆರೆದಿವೆ. ಸದ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.ಬೆಂಗಳೂರಿನಲ್ಲಿ ಬೆಳಿಗ್ಗೆ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿದಿವೆ. ಕೆ.ಆರ್‌.ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ. ಆಸ್ಪತ್ರೆ, ಔಷಧಿ ಕೇಂದ್ರಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಮಂಗಳೂರಿನಲ್ಲಿ ಎಂದಿನಂತೆ ಬಸ್‌ ಸಂಚಾರ

24 ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂದ್‌ ಸ್ಥಿತಿಗತಿಗಳನ್ನು ನೋಡಿಕೊಂಡು ಅಲ್ಲಿನ ಜಿಲ್ಲಾಧಿಕಾರಿಗಳು ರಜೆ ಘೋಷಿಸಲಿದ್ದು, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಹಾಸನ, ಯಾದಗಿರಿ, ಶಿವಮೊಗ್ಗದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ.

ಗದಗ: ನಸುಕಿನಲ್ಲೇ ತಟ್ಟಿದ ಬಂದ್‌ ಬಿಸಿ

ಜಿಲ್ಲೆಯಾದ್ಯಂತ ಸರ್ಕಾರಿ ಬಸ್‌ಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ದೂರದ ಊರುಗಳಿಂದ ಸೋಮವಾರ ರಾತ್ರಿ ಹೊರಟು, ಮಂಗಳವಾರ ಬೆಳಿಗ್ಗೆಜಿಲ್ಲಾ ಕೇಂದ್ರ ಪ್ರವೇಶಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳು, ನಿಲ್ದಾಣಕ್ಕೆ ಬಾರದೆಪ್ರಯಾಣಿಕರನ್ನು ಪ್ರಮುಖ ವೃತ್ತಗಳಲ್ಲಿ ಇಳಿಸಿ ನೇರವಾಗಿ ಘಟಕಕ್ಕೆ ಹೋಗುತ್ತಿವೆ. ಆಟೊ ಸಂಚಾರವೂ ವಿರಳವಾಗಿರುವುದರಿಂದ ಪ್ರಯಾಣಿಕರು ಪರದಾಡಿದರು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ.

ಪೊಲೀಸ್‌ ಬಂದೋಬಸ್ತ್

ಮಂಗಳವಾರ ಬೆಳಗಿನ ಜಾವ 6:30ಕ್ಕೆ ನಗರದಲ್ಲಿ ಪ್ರತಿಭಟನೆ ಬಿಸಿ ತಟ್ಟಿತು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸದ್ಯರು ಗದುಗಿನ ಮಹಾತ್ಮಗಾಂಧಿ ವೃತ್ತ, ಪಿಬಿ ರಸ್ತೆ, ಮುಳಗುಂದ ನಾಕಾ ಮಾರ್ಗದಲ್ಲಿ ಸಾಂಕೇತಿಕವಾಗಿ ಬೈಕ್‌ ರ್‍ಯಾಲಿ ನಡೆಸಿದರು.10 ಗಂಟೆ ಸುಮಾರಿಗೆ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

ಹಾಲು, ಹೋಟೆಲ್‌, ಪೆಟ್ರೋಲ್‌ ಬಂಕ್‌ಗಳು ತೆರೆದಿವೆ. ನಗರದ ಹೊರವಲಯದಲ್ಲಿರುವ ಕಿರಾಣಿ ಅಂಗಡಿಗಳು ತೆರೆದಿವೆ.ಮಂಗಳವಾರ ನಡೆಯಬೇಕಿದ್ದ ಇಲ್ಲಿನ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಶಿರಸಿ:ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು,ಪ್ರಯಾಣಿಕರು ಪರದಾಡುತ್ತಿದ್ದಾರೆ.ಆಟೊರಿಕ್ಷಾಗಳ ಸಂಚಾರ ಎಂದಿನಂತೆ ಇದೆ. ಅಂಗಡಿಗಳುತೆರೆದಿವೆ.

ಬಿಕೊ ಎನ್ನುತ್ತಿದೆ ಶಿರಸಿ ಬಸ್‌ ನಿಲ್ದಾಣ

ಬೀದರ್: ಬಸ್, ಆಟೊ ಸಂಚಾರ ಸಹಜವಾಗಿದೆ. ಹೋಟೆಲ್,ಅಂಗಡಿಗಳು ತೆರೆದಿವೆ.10 ಗಂಟೆಯ ನಂತರ ಕಾಮಿ೯ಕರು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.

ವಿಜಯಪುರ: ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿಲ್ಲ.ಆಟೊ, ನಗರ ಸಾರಿಗೆ ಬಸ್‌ಗಳ ಸಂಚಾರ ಯಥಾಸ್ಥಿತಿ ಇದೆ.ಅಂಗಡಿಗಳು ಬಾಗಿಲು ತೆರೆದಿದ್ದು,ವಹಿವಾಟು ಆರಂಭಗೊಂಡಿದೆ. ಎಲ್ಲಡೆ ಬಿಗಿ ಪೊಲೀಸ್ ಭದ್ರತೆಯಿದೆ.

ಶಾಲಾ ಬಸ್‌ಗಳ ಸಂಚಾರ ಎಂದಿನಂತೆ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಇಲ್ಲಿಬಂದ್ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಬಂದ್‌ ಯಶಸ್ವಿಯಾಗದಂತೆ ಎಚ್ಚರವಹಿಸಿರುವ ಸರ್ಕಾರ ಹೆಚ್ಚುವರಿ ಬಸ್‌ ಸೇವೆಯನ್ನು ಒದಗಿಸುತ್ತಿದೆ. ವಾಹನಗಳಿಗೆ ಯಾವುದೇ ರೀತಿಯ ಹಾನಿಯಾಗದಿರುವುದಂತೆ ನೋಡಿಕೊಳ್ಳಲು ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದೆ.

ಇಲ್ಲಿನ ಟಾಕ್ಸಿ ಸಂಘಟನೆ, ಸರ್ಕಾರಿ ಸಾರಿಗೆ ಸಂಸ್ಥೆ ಮತ್ತು ಕ್ಯಾಬ್‌ ಚಾಲಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ‘ಬಂದ್‌ ದಿನದಂದು ವಾಹನ ಸೇವೆ ನೀಡುವವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದುಸಾರಿಗೆ ಸಚಿವ ಸುವೆಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.