ADVERTISEMENT

ಭೀಮಗಡ ಅಭಯಾರಣ್ಯ: ಅರಣ್ಯವಾಸಿಗಳ ಸ್ಥಳಾಂತರದಲ್ಲಿ ಅಕ್ರಮ; ಕೇಂದ್ರಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 11:36 IST
Last Updated 13 ಡಿಸೆಂಬರ್ 2025, 11:36 IST
<div class="paragraphs"><p>ಭೀಮಗಡ ಅಭಯಾರಣ್ಯ</p></div>

ಭೀಮಗಡ ಅಭಯಾರಣ್ಯ

   

ನವದೆಹಲಿ: ಬೆಳಗಾವಿ ಜಿಲ್ಲೆಯ ಭೀಮಗಡ ಅಭಯಾರಣ್ಯದ ಅರಣ್ಯವಾಸಿಗಳ ಸ್ಥಳಾಂತರ ಯೋಜನೆಯಲ್ಲಿ ಕಾಂಪಾ ನಿಧಿ ದುರ್ಬಳಕೆ ಮತ್ತು ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಪ್ರಮೋದ್ ಎಂಬುವವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಬೆಳಗಾವಿ ವೃತ್ತದ ಹಿಂದಿನ ಡಿಸಿಎಫ್ ಮರಿಯಾ ಕ್ರಿಸ್ತರಾಜು, ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ, ಭೀಮಗಡ ವಲಯ ಅರಣ್ಯಾಧಿಕಾರಿ ಸಯ್ಯದ್ ನದಾಫ್, ಕಂದಾಯ ಇಲಾಖೆ ಹಾಗೂ ನೇರ್ಸಾ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ. 

ADVERTISEMENT

‘ಈ ಅಕ್ರಮ ಗವಾಳಿ ಗ್ರಾಮದ ತಳೇವಾಡಿ ಮಜಿರೆಯಲ್ಲಿ ನಡೆದಿದೆ. ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಿದ 57 ಕುಟುಂಬಗಳಲ್ಲಿ 32 ಕುಟುಂಬಗಳ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿ, 27 ಕುಟುಂಬಗಳಿಗೆ ತಲಾ ₹10 ಲಕ್ಷ ಮೊತ್ತದ ಮೊದಲ ಹಂತದ ಪರಿಹಾರ ವಿತರಿಸಲಾಗಿದೆ. ಆದರೆಮ ಗವಾಳಿ (ತಳೇವಾಡಿ) ಸರ್ವೇ ನಂ.49ರಲ್ಲಿ ನಡೆದಿರುವ ಅಕ್ರಮ ಅತ್ಯಂತ ಗಂಭೀರವಾಗಿದೆ. ಈ ಜಮೀನನ್ನು ಹಾಸನ ಜಿಲ್ಲೆಯ ಎಂ.ಎಂ. ಸುರೇಶ್ ಅವರು ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕಾಗಿ ಖರೀದಿಸಿದ್ದರು. ಈ ಜಮೀನು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಯೋಗ್ಯವೆಂದು ಬೆಳಗಾವಿ ಡಿಸಿಎಫ್ ಸ್ವತಃ ಪ್ರಮಾಣಪತ್ರ ನೀಡಿದ್ದರು. ಇದಾದ ನಂತರವೂ, ಅದೇ ಖಾಸಗಿ ಜಮೀನನ್ನು ಅರಣ್ಯವಾಸಿಗಳ ಮನೆ ಎಂಬುದಾಗಿ ದಾಖಲೆಗಳಲ್ಲಿ ತೋರಿಸಿ 10 ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ನೇರವಾಗಿ ದುರ್ಬಳಕೆಯಾಗಿದೆ‘ ಎಂದು ಅವರು ದಾಖಲೆ ಸಮೇತ ದೂರಿದ್ದಾರೆ. 

‘ಪರಿಹಾರ ಪಡೆದ ಉಳಿದ 17 ಕುಟುಂಬಗಳಲ್ಲಿ ಬಹುಪಾಲು ಗ್ರಾಮಠಾಣದಲ್ಲೇ ವಾಸವಿದ್ದು, ಕೆಲವರಿಗೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಸ್ವಂತ ಜಮೀನೇ ಇಲ್ಲ. ಆದರೆ, ಅಭಯಾರಣ್ಯದಲ್ಲಿ ಜಮೀನು ಹೊಂದಿದ್ದ 30 ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಬಗ್ಗೆ ವಿಧಾನ ಪರಿಷತ್‌ನ ಅಧಿವೇಶನದಲ್ಲಿ (ಆಗಸ್ಟ್‌) ಸದಸ್ಯ ಶಾಂತಾರಾಮ್ ಸಿದ್ದಿ ಕೇಳಿದ್ದ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಉತ್ತರ ನೀಡಿದ್ದಾರೆ‘ ಎಂದೂ ಅವರು ಗಮನ ಸೆಳೆದಿದ್ದಾರೆ. 

ಪರಿಹಾರ ಪಡೆದವರಿಂದಲೂ ಅಕ್ರಮ: ಪರಿಹಾರ ಪಡೆದಿರುವ ಪೈಕಿ ಕೂಡ ಹಲವಾರು ಸುಳ್ಳು ಮಾಹಿತಿ ನೀಡಿ ಪರಿಹಾರ ಪಡೆದಿದ್ದಾರೆ. ಉದಾಹರಣೆಗೆ, ಬಯಾಜಿ ಜಾನು ವರಕ ಮತ್ತು ವಿಠಲ್ ಬಯಾಜಿ ವರಕ ಎಂಬುವವರು ಎಂ.ಎಂ. ಸುರೇಶ್ ಜಮೀನಿನಲ್ಲಿ ವಾಸವಿರುವುದಾಗಿ ಹೇಳಿ ಒಪ್ಪಂದ ಪತ್ರ ನೀಡಿದ್ದಾರೆ. ಆದರೆ, ಇದೇ ವ್ಯಕ್ತಿಗಳು ಗ್ರಾಮಠಾಣದಲ್ಲಿ ಕಟ್ಟಿರುವ ಮನೆ ಇರುವ ಕುರಿತು 2024ರ ಮಾರ್ಚ್‌ನಲ್ಲಿ ನೇರ್ಸಾ ಗ್ರಾಮ ಪಂಚಾಯತಿಗೆ ಆಸ್ತಿ ತೆರಿಗೆ ಪಾವತಿಸಿದ್ದಾರೆ‘ ಎಂದು ಅವರು ಹೇಳಿದ್ದಾರೆ. 

ಸ್ಥಳಾಂತರ ಪ್ರಕ್ರಿಯೆಯಲ್ಲಿ ಗ್ರಾಮಸಭೆಯ ಒಪ್ಪಿಗೆ ಪಡೆಯದೇ ಡಿಸಿಎಫ್ ಎರಡು ಬಾರಿ ಜಿಲ್ಲಾಧಿಕಾರಿ ಸಮಿತಿ ಮುಂದೆ ಪ್ರಸ್ತಾವ ಮಂಡಿಸಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಒಪ್ಪಿಗೆ ನೀಡಿದ್ದರು. ಅರಣ್ಯ ಸಚಿವರು ಚೆಕ್ ವಿತರಿಸಲು ಬರುತ್ತಾರೆ ಎಂಬ ಮಾಹಿತಿ ಬಂದ ನಂತರ ತರಾತುರಿಯಲ್ಲಿ ನೇರ್ಸಾ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಸಭೆ ನಡೆಸಿದ್ದರು. ಇದು ಸಹ ನಿಯಮಬಾಹಿರ ಎಂದೂ ಅವರು ದೂರಿದ್ದಾರೆ. 

ಅನರ್ಹರಿಂದ ಪರಿಹಾರ ಮೊತ್ತ ವಾಪಸ್‌ ಪಡೆಯಬೇಕು. ಬೆಳಗಾವಿ ಡಿಸಿಎಫ್, ಖಾನಾಪುರ ಎಸಿಎಫ್ ಮತ್ತು ಭೀಮಗಡ ಆರ್‌ಎಫ್‌ಒ ಅವರಿಂದಲೇ ವಸೂಲಿ ಮಾಡಬೇಕು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.