ADVERTISEMENT

ಹೊಸಪೇಟೆಯಲ್ಲಿ ನಗರಸಭೆಯಲ್ಲಿ ಅಕ್ರಮ ಬೆಂಬಲಿಸುವ ದೊಡ್ಡ ಜಾಲ?

ಆರೋಪಗಳನ್ನು ಪುಷ್ಟೀಕರಿಸುವ ರೀತಿಯಲ್ಲಿ ನಗರಸಭೆ ಸಿಬ್ಬಂದಿ ವಿರುದ್ಧ ಪ್ರಕರಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಮೇ 2022, 8:39 IST
Last Updated 26 ಮೇ 2022, 8:39 IST
ಹೊಸಪೇಟೆ ನಗರಸಭೆ ಕಚೇರಿ
ಹೊಸಪೇಟೆ ನಗರಸಭೆ ಕಚೇರಿ   

ಹೊಸಪೇಟೆ (ವಿಜಯನಗರ): ಅಕ್ರಮಗಳನ್ನು ಬೆಂಬಲಿಸುವ ದೊಡ್ಡ ಜಾಲವೇ ನಗರಸಭೆಯಲ್ಲಿ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ.

‘ಅಕ್ರಮವಾಗಿ ಖಾಸಗಿ ಹಾಗೂ ಸರ್ಕಾರಿ ಜಮೀನು ಕಬಳಿಸುವವರ ಬೆನ್ನ ಹಿಂದೆ ನಗರಸಭೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಇದ್ದಾರೆ. ಅಂತಹವರ ಹಿತ ಕಾಯುವುದೇ ಅವರಿಗೆ ಮುಖ್ಯ ಹೊರತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ’ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದವು. ಆದರೆ, ಆ ನಿಟ್ಟಿನಲ್ಲಿ ಯಾರ ವಿರುದ್ಧವೂ ಕಾನೂನು ಕ್ರಮ ಆಗಿಲ್ಲ. ಈಗ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಜಮೀನು ಲಪಟಾಯಿಸಲು ನೆರವಾದ ಗಂಭೀರ ಸ್ವರೂಪದ ಆರೋಪ ನಗರಸಭೆಯವರ ವಿರುದ್ಧ ಬಂದಿದೆ. ಇದು ಇಷ್ಟಕ್ಕೆ ಸೀಮಿತಗೊಳ್ಳದೇ ಠಾಣೆಯ ಮೆಟ್ಟಿಲೇರಿದೆ. ಸ್ವತಃ ಮೇಲಧಿಕಾರಿಗಳೇ ಠಾಣೆಗೆ ಹಲವರ ವಿರುದ್ಧ ದೂರು ಕೊಟ್ಟಿದ್ದಾರೆ. ಇದನ್ನು ನೋಡಿದರೆ ದೊಡ್ಡ ಜಾಲ ಇದರಲ್ಲಿ ಸಕ್ರಿಯವಾದಂತೆ ಕಾಣಿಸುತ್ತಿದೆ.

ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸುವ ಯತ್ನದಡಿ ನಾಲ್ಕು ಪ್ರತ್ಯೇಕ ಘಟನೆಗಳಡಿ ಒಟ್ಟು 17 ಜನರ ವಿರುದ್ಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮಕ್ಕೆ ನೆರವು ನೀಡಿ, ಸಹಾಯ ಮಾಡಿದವರಲ್ಲಿ ಹೆಚ್ಚಿನವರು ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಯೇ ಇದ್ದಾರೆ. 1999ರಿಂದ 2022ರ ವರೆಗಿನ ಅವಧಿಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಈ ಸುದೀರ್ಘ ಅವಧಿಯಲ್ಲಿ ಮೇಲಧಿಕಾರಿಗಳು ಏಕೆ ಮೌನ ವಹಿಸಿದ್ದರು? ಈಗೇಕೆ ಹಠಾತ್‌ ಆಗಿ ಠಾಣೆಗೆ ದೂರು ಕೊಟ್ಟಿದ್ದಾರೆ? ಈ ರೀತಿಯ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಅದಕ್ಕೆ ನಗರಸಭೆಯೇ ಉತ್ತರಿಸಬೇಕು.

ADVERTISEMENT

ಗಂಭೀರ ಸ್ವರೂಪದ ಆರೋಪಗಳು ಬಂದ ನಂತರ ನಗರಸಭೆಯಲ್ಲಿ ಇರುವವರೆಲ್ಲರೂ ಅಕ್ರಮವನ್ನು ಬೆಂಬಲಿಸುವವರು ಎಂದರ್ಥವಲ್ಲ. ಕೆಲ ಅಧಿಕಾರಿಗಳು ನಗರಸಭೆಯಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ್ದರು. ಆದರೆ, ಅವರಿಗೆ ಆ ಕೆಲಸ ಮಾಡಲು ಬಿಡಲಿಲ್ಲ. ಇಷ್ಟೇ ಅಲ್ಲ, ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಇನ್ನು, ಕೆಲ ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲಸ ಮಾಡಲು ಬಿಡುತ್ತಿಲ್ಲ ಎಂಬ ಆರೋಪಗಳು ಇವೆ. ಏನೇ ಇರಲಿ ತಡವಾಗಿಯಾದರೂ ನಗರಸಭೆಯಲ್ಲಿನ ಅಕ್ರಮ ಹೊರಗೆ ಬಂದಿದೆ. ನಗರಸಭೆಯ ಅಧಿಕಾರಿಗಳು ಅಕ್ರಮಕ್ಕೆ ನೆರವಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿರುವ ಜಿಲ್ಲಾಡಳಿತ ಈಗ ಕ್ರಮಕ್ಕೂ ಮುಂದಾಗಿದೆ.

‘ಅಕ್ರಮದ ಕುರಿತು ದೂರು ಬರಲಿಲ್ಲವೋ ಅಥವಾ ಬೇರೆ ಏನು ಕಾರಣವೋ ಯಾರೂ ಅದನ್ನು ಪರಿಶೀಲಿಸಲಿಲ್ಲ. ನಕಲಿ ದಾಖಲೆ ಸೃಷ್ಟಿಸಿಕೊಂಡು ಕ್ಲೇಮ್‌ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅದಕ್ಕೆ ನಗರಸಭೆ ಅಧಿಕಾರಿಗಳ ಸಹಾಯ ಸಿಕ್ಕಿತ್ತು. ಈಗ ಗೊತ್ತಾಗಿದೆ. ಠಾಣೆಗೆ ದೂರು ಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.