ADVERTISEMENT

ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿಗೆ ನಿರೀಕ್ಷಣಾ ಜಾಮೀನು ನಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 15:50 IST
Last Updated 10 ಫೆಬ್ರುವರಿ 2026, 15:50 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ಬೆಂಗಳೂರು: ‘ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ರಾಜಕೀಯ ಅಧಿಕಾರ ಹೊಂದಿದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು ಈ ಪ್ರಕರಣದಲ್ಲಿ ತನಿಖೆಯ ವಿಧಾನದ ನಿರ್ಧಾರವನ್ನು ತನಿಖಾ ಪ್ರಾಧಿಕಾರದ ವಿವೇಚನೆಗೆ ಬಿಡಲಾಗಿದೆ. ಹೀಗಾಗಿ, ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗದು’ ಎಂದು ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

ನಿರೀಕ್ಷಣಾ ಜಾಮೀನು ಕೋರಿ ಬಸವರಾಜ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.

‘ಅರ್ಜಿದಾರರು ಮತ್ತು ಮೃತರ ನಡುವೆ ಈ ಹಿಂದೆಯೇ ದ್ವೇಷವಿತ್ತು ಎಂಬುದು ದಾಖಲೆಗಳ ಮೂಲಕ ತಿಳಿದು ಬರುತ್ತದೆ. ಅರ್ಜಿದಾರರು ಮತ್ತು ಮೃತ ವ್ಯಕ್ತಿ, ಬಿಕ್ಲು ಶಿವು ಅವರ ತಾಯಿ ಒಂದೇ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಿದರೆ ಅದರಿಂದ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ತನಿಖಾ ದಾಖಲೆಗಳು, ಛಾಯಾಚಿತ್ರ ಮತ್ತು ಸಿಡಿಆರ್‌ಗಳನ್ನು (ಕಾಲ್‌ ಡೀಟೇಲ್‌ ರೆಕಾರ್ಡ್‌) ಪರಿಶೀಲಿಸಿದಾಗ, ಅರ್ಜಿದಾರರು ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಚ್ಚಳವಾಗಿದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ADVERTISEMENT

‘ಶಿವು ಜೀವಭಯದಲ್ಲಿ ದಿನದೂಡುತ್ತಿದ್ದ ಎಂದು ಮೃತ ವ್ಯಕ್ತಿಯ ತಾಯಿಯೂ ವಿಚಾರಣಾ ನ್ಯಾಯಾಲಯದಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ನೀಡಿರುವ ಹೇಳಿಕೆಯಲ್ಲಿ ವಿಶದಪಡಿಸಿದ್ದಾರೆ. ಈ ಹೇಳಿಕೆಯನ್ನು ಆಧರಿಸಿದ ಪ್ರಾಸಿಕ್ಯೂಷನ್‌ ವಾದ ಸಾಕಷ್ಟು ಬಲಿಷ್ಠವಾಗಿದ್ದು ಅದನ್ನು ತಳ್ಳಿಹಾಕಲು ಆಗದು’ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

‘ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆಸ್ತಿಯ ಸ್ವಾಧೀನವನ್ನು ಬಿಟ್ಟುಕೊಡದಿದ್ದರೆ ಮತ್ತು ಅಸ್ತಿತ್ವದಲ್ಲಿರುವ ಸಾಮಾನ್ಯ ಅಧಿಕಾರ ಪತ್ರವನ್ನು (ಜಿಪಿಎ) ರದ್ದುಗೊಳಿಸದೇ ಹೋದಲ್ಲಿ ಮೊದಲನೇ ಆರೋಪಿ ಜಗದೀಶ್‌ ಅಲಿಯಾಸ್ ಜಗ್ಗ ಹಾಗೂ 2ನೇ ಆರೋಪಿಯಾಗಿರುವ ಅವರ ಸೋದರಳಿಯ ಕಿರಣ್‌ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಕ್ಲು ಶಿವು ಮೊದಲೇ ನಿರ್ದಿಷ್ಟವಾಗಿ ಪ್ರತಿಪಾದಿಸಿರುವುದು ದಾಖಲೆಗಳಲ್ಲಿ ಗೋಚರಿಸುತ್ತದೆ. ಹೀಗಾಗಿ, ಶಿವುಗೆ ಜೀವ ಬೆದರಿಕೆ ಇತ್ತು ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, 1 ಮತ್ತು 2 ಆರೋಪಿಗಳು ಹಾಗೂ ಬೈರತಿ ಬಸವರಾಜ ಅದಕ್ಕೆ ಜವಾಬ್ದಾರರಾಗುತ್ತಾರೆ ಎಂಬ ಅಂಶ ಲಿಖಿತವಾಗಿಯೇ ಇರುವುದು ಕಂಡು ಬರುತ್ತದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

‘ನಿಯಮಗಳನ್ನು ನೆಚ್ಚಿಕೊಂಡು ನಿರೀಕ್ಷಣಾ ಜಾಮೀನು ನೀಡುವ ಪರಿಪಾಟಕ್ಕಿಂತಲೂ ಅಂತಹುದೊಂದು ಅಸಾಧಾರಣ ಪರಿಹಾರವನ್ನು ಆಶ್ರಯಿಸುವುದಕ್ಕೆ ಅಷ್ಟೇ ಮುಖ್ಯವಾದ ಅಸಾಧಾರಣ ಸಂದರ್ಭಗಳಿವೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾದಾಗ ಮಾತ್ರ ಜಾಮೀನು ಮಂಜೂರು ಮಾಡಬೇಕು’ ಎಂದು ಹೇಳಿದೆ. ಸರ್ಕಾರದ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.