ADVERTISEMENT

ಬಿಲ್ ಪಾವತಿಗೆ ‘ಬೆಸ್ಕಾಂ ಮಿತ್ರ’ ಆ್ಯಪ್‌ ಬಳಸಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 2:55 IST
Last Updated 27 ಜೂನ್ 2019, 2:55 IST
ಸಿ.ಶಿಖಾ ಮಾತನಾಡಿದರು. ಬೆಸ್ಕಾಂ ನಿರ್ದೇಶಕ (ತಾಂತ್ರಿಕ) ಅಶೋಕ್‌ ಕುಮಾರ್‌, ಮುಖ್ಯ ಎಂಜಿನಿಯರ್ ಬಿ.ಗುರುಮೂರ್ತಿ, ಡಿಜಿಎಂ ಹರಿಣಿ ಚಿತ್ರದಲ್ಲಿದ್ದಾರೆ
ಸಿ.ಶಿಖಾ ಮಾತನಾಡಿದರು. ಬೆಸ್ಕಾಂ ನಿರ್ದೇಶಕ (ತಾಂತ್ರಿಕ) ಅಶೋಕ್‌ ಕುಮಾರ್‌, ಮುಖ್ಯ ಎಂಜಿನಿಯರ್ ಬಿ.ಗುರುಮೂರ್ತಿ, ಡಿಜಿಎಂ ಹರಿಣಿ ಚಿತ್ರದಲ್ಲಿದ್ದಾರೆ   

l ಕಲ್ಲೇಶ್‌, ನಾಗದೇವನಹಳ್ಳಿ
ಬಿಲ್‌ ಕಟ್ಟಿದರೂ, ಮನೆಯ ಫ್ಯೂಸ್‌ ತೆಗೆದಿದ್ದಾರೆ. 2–3 ಬಾರಿ ಹೀಗೆ ಆಗಿದೆ. ಏಕೆ ಹೀಗೆ?

ಬೆಂಗಳೂರು ವನ್‌ನಲ್ಲಿ ಪಾವತಿಸುವ ವಿದ್ಯುತ್‌ ಬಿಲ್‌ ಬೆಸ್ಕಾಂ ಖಾತೆಗೆ ಜಮೆಯಾಗಲು 3 ದಿನ ಬೇಕು. ಬಿಲ್‌ ಪಾವತಿಯ 15 ದಿನಗಳ ಗಡುವು ಮುಗಿದ ಬಳಿಕ ಮತ್ತೆ 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡುತ್ತೇವೆ. ಆಗಲೂ ಕಟ್ಟದಿದ್ದರೆ ಮಾತ್ರ ಫ್ಯೂಸ್‌ ತೆಗೆಯಲಾಗುತ್ತದೆ. ಇದಕ್ಕಾಗಿ ನೀವು ‘ಬೆಸ್ಕಾಂ ಮಿತ್ರ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲೇ ಬಿಲ್‌ ಪಾವತಿಸಿ. ತಕ್ಷಣ ಬಿಲ್‌ ಪಾವತಿಯೂ ಆಗುತ್ತದೆ. ಅದರಲ್ಲಿ ವಿದ್ಯುತ್‌ ಪೂರೈಕೆ ವ್ಯತ್ಯಯಕ್ಕೆ ಸಂಬಂಧಿಸಿದ ಸಂದೇಶಗಳನ್ನೂ ಪಡೆಯಬಹುದು.

l ಮುನಿರಾಜು, ಹೆಣ್ಣೂರು
ವೀರಣ್ಣ ಗಾರ್ಡನ್‌ನಲ್ಲಿ ವಿದ್ಯುತ್‌ ತಂತಿ ತುಂಬಾ ಕೆಳಗಡೆ ಜೋತಾಡುತ್ತಿದೆ. ಎ.ಬಿ ಕೇಬಲ್ ಬದಲಾವಣೆ ಮಾಡಿ ಎಂದು ಎರಡು ವರ್ಷದಿಂದಲೇ ಹೇಳಿದ್ದೇವೆ. ಭೂಗತ ಕೇಬಲ್ ಹಾಕಲು ತೆಗೆದ ಗುಂಡಿಯನ್ನೂ ಸರಿಯಾಗಿ ಮುಚ್ಚುವುದಿಲ್ಲ. ಕಟ್ಟಡ ಕಟ್ಟಿದ ಬಳಿಕ ವಿದ್ಯುತ್‌ ಸಂಪರ್ಕ ಕೊಡುವಾಗಲೂ ರಸ್ತೆಯಲ್ಲೇ ರೌಂಡ್‌ ಪೋಲ್‌ ಅಳವಡಿಸಲಾಗುತ್ತಿದೆ. ಇದನ್ನು ಸರಿಪಡಿಸಿ.

ADVERTISEMENT

ಜೋತು ಬಿದ್ದ ತಂತಿಗಳನ್ನುಆದ್ಯತೆಯ ಮೇಲೆ ಬದಲಾಯಿಸುತ್ತೇವೆ. ರಸ್ತೆ ಅಗೆಯದೆಯೇ ಕೇಬಲ್‌ ಅಳವಡಿಸುವ ವಿಧಾನ ಅನುಸರಿಸುತ್ತಿದ್ದೇವೆ. ಇದರಲ್ಲೂ 200 ಮೀಟರ್‌ಗೆ ಒಂದು ಗುಂಡಿ ತೋಡಬೇಕಾಗುತ್ತದೆ. ಏಜೆನ್ಸಿಯವರು ತಕ್ಷಣವೇ ಆ ಗುಂಡಿಮುಚ್ಚಬೇಕು. ಗುತ್ತಿಗೆದಾರರಿಗೆ ಈ ಬಗ್ಗೆ ಸೂಚನೆ ನೀಡುತ್ತೇವೆ. ಬಹುಮಹಡಿ ಕಟ್ಟಡಗಳಿಗೆ ಮಾಲೀಕರೇ ಟಿ.ಸಿ ಅಳವಡಿಸಬೇಕು. ರಸ್ತೆಯಲ್ಲಿ ಟಿ.ಸಿ ಹಾಕದಂತೆ ಕ್ರಮ ಕೈಗೊಳ್ಳುತ್ತೇವೆ.

***

l ವಿನಯ್‌, ವೈಟ್‌ಫೀಲ್ಡ್
ಬಹುಮಹಡಿ ಕಟ್ಟಡಕ್ಕೆ ಟಿ.ಸಿ ನಿಯಮ ಏನು ಹೇಳುತ್ತದೆ?

800 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೆ ಮಾಲೀಕರೇ ಟಿ.ಸಿ ಅಳವಡಿಸಬೇಕು. 500ರಿಂದ 800 ಚದರ ಮೀಟರ್ ಒಳಗಿನ ಕಟ್ಟಡಕ್ಕೆ ಬೆಸ್ಕಾಂ ಅಳವಡಿಸುತ್ತದೆ. ಅದಕ್ಕೆ ಜಾಗವನ್ನು ಕಟ್ಟಡದವರೇ ಒದಗಿಸಬೇಕು. ಬೆಸ್ಕಾಂ ಹೀಗೆ ಅಳವಡಿಸುವ ವಿದ್ಯುತ್ ಪರಿವರ್ತಕಕ್ಕೆ ಸುಮಾರು ₹ 8 ಲಕ್ಷದಿಂದ 10 ಲಕ್ಷದಷ್ಟು ವೆಚ್ಚ ತಗಲುತ್ತದೆ.

l ಅಶ್ರಫ್‌, ಚನ್ನಗಿರಿ
ಮನೆಯ ಮೇಲೆ 10 ಲೈನ್ ಎಳೆದಿದ್ದಾರೆ. ಜೋತು ಬಿದ್ದಿವೆ. ಅದನ್ನು ಇನ್ನೂ ಸರಿಪಡಿಸಿಲ್ಲ

ತಕ್ಷಣ ಅದನ್ನು ಸರಿಪಡಿಸುತ್ತೇವೆ.

***

l ಭರತ್‌, ದಾವಣಗೆರೆ
ಮನೆ ಸಮೀಪ ಟ್ರಾನ್ಸ್‌ಫಾರ್ಮರ್‌ ಭಾರಿ ಸದ್ದು ಮಾಡುತ್ತಿದೆ. ಆತಂಕವಾಗಿದೆ.

ಸುರಕ್ಷತೆ ವಿಷಯಲ್ಲಿ ಯಾವುದೇ ನಿರ್ಲಕ್ಷ್ಯ ಇಲ್ಲ. ತಕ್ಷಣ ಕ್ರಮ ಕೈಗೊಳ್ಳುತ್ತೇವೆ.

l ತಿಮ್ಮಪ್ಪರಾಜು, ಬೇವೂರು, ಚನ್ನಪಟ್ಟಣ
ನಮ್ಮೂರಿನ ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕವಿದೆ. ಆದರೆ, ನಮ್ಮ ಮನೆಗೆ 40 ವರ್ಷದಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ.

ಸಿವಿಲ್‌ ವ್ಯಾಜ್ಯ ಇಲ್ಲ ಎಂದು ಹೇಳುತ್ತಿದ್ದೀರಿ. ಇದರ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ.

***

l ಗಿರೀಶ್, ಚಿಕ್ಕಬಾಣಾವರ
ಎಚ್‌.ಟಿ ಮಾರ್ಗದ ಹಾಗೂ ಸಬ್‌ಲೈನ್‌ನ ತಂತಿಗಳು ಜೋತಾಡುತ್ತಿವೆ.

ಸ್ಥಳ ಪರಿಶೀಲನೆ ಮಾಡಿ ತಕ್ಷಣವೇ ಸರಿಪಡಿಸುತ್ತೇವೆ.

***

l ಸುರೇಶ್‌, ಹೊಸಕೋಟೆ
ನನ್ನ ನಿವೇಶನ ಸುತ್ತಲೂ ವಿದ್ಯುತ್ ಕಂಬ ಹಾಕಿದ್ದಾರೆ. ಏಕೆ ಹೀಗೆ?

ಪರಿಶೀಲಿಸಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.

***

l ನಾಗರಿಕ, ಹುಳಿಯಾರು
ವಿದ್ಯುತ್‌ ಕಳವು ನಡೆಯುತ್ತಿದೆ. ಇದರ ಬಗ್ಗೆ ಗಮನ ಹರಿಸಿ

ವಿಚಕ್ಷಣಾ ದಳದಿಂದ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

***

l ಕೆಂಪೇಗೌಡ, ಉಲ್ಲಾಳ
ಮನೆ ಮುಂದೆ ವಿದ್ಯುತ್ ಕಂಬಗಳು ಬಾಗಿಕೊಂಡಿವೆ. ತಂತಿಗಳು ತುಂಡಾಗಿ ಬೀಳುವಂತಿವೆ.

ಇದರ ಬಗ್ಗೆ ಬೇಗನೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

***

l ಕೃಷ್ಣ, ಸಹಕಾರನಗರ
ಇಲ್ಲಿನ ಬೆಸ್ಕಾಂ ಕಚೇರಿಯಲ್ಲೇ ಕರೆಂಟ್‌ ಇರುವುದಿಲ್ಲ.

ಶೀಘ್ರವೇ ಇದನ್ನು ಸರಿಪಡಿಸಲಿದ್ದೇವೆ. ಅಲ್ಲಿಗೆ ಯುಪಿಎಸ್‌ ಒದಗಿಸುತ್ತೇವೆ.

***

l ಪ್ರಕಾಶ್, ಜಯನಗರ
ಮನೆಯ ಮುಂದೆ ವಿದ್ಯುತ್‌ ತಂತಿ ಇದ್ದು, ಅದರ ಮೇಲೆ ಮರ ಬೀಳುವಂತಿದೆ.

ತಕ್ಷಣ ಮರದ ಕೊಂಬೆ ಕಡಿಯಲುಕ್ರಮ ಕೈಗೊಳ್ಳಲಾಗುವುದು.

***

l ನವೀನ್‌, ದಾಸರಹಳ್ಳಿ
ಫೋನ್‌–ಇನ್‌ ಕಾರ್ಯಕ್ರಮ ಬಹಳ ಉತ್ತಮವಾದುದು. ಬೆಸ್ಕಾಂ ಸಹ ಗ್ರಾಹಕರ ಸಭೆ ನಡೆಸಿ ಉತ್ತಮ ಕೆಲಸ ಮಾಡುತ್ತಿದೆ. ಇದನ್ನು ಮುಂದುವರಿಸಿ

ಧನ್ಯವಾದ. ತಿಂಗಳ ಮೂರನೇ ಶನಿವಾರ ಪ್ರತಿ ಉಪವಿಭಾಗದಲ್ಲಿ ಗ್ರಾಹಕರ ಸಭೆ ನಡೆಸಿ ಕುಂದುಕೊರತೆ ಆಲಿಸುತ್ತಿದ್ದೇವೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು

***

l ರವಿಕುಮಾರ್‌, ಚಿಕ್ಕಬಾಣಾವರ
ಎಚ್‌.ಟಿ ಲೈನ್ ಕೆಳಗೆ ಸಬ್‌ಲೈನ್‌ ಇದೆ. ಅಪಾಯಕಾರಿಯಾಗಿದೆ.

ಸ್ಥಳ ಪರಿಶೀಲನೆ ನಡೆಸಿ, ಅದನ್ನು ಸರಿಪಡಿಸುತ್ತೇವೆ

***

l ವಿಶ್ವನಾಥ್‌, ಮರಿಯಪ್ಪನಪಾಳ್ಯ
ಜ್ಞಾನಗಂಗಾನಗರ ಭಾಗದಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಆಗುತ್ತಿದೆ.3–4 ಗಂಟೆಗೊಮ್ಮೆ ಈ ಸಮಸ್ಯೆ ಮರುಕಳಿಸುತ್ತಲೇ ಇದೆ.

ಇದರ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆ ನಿವಾರಿಸುತ್ತೇವೆ.

***

l ಹರೀಶ್‌, ಕೆಂಗೇರಿ ನಾಗದೇವನಹಳ್ಳಿ
ಪಕ್ಕದಲ್ಲೇ ಇರುವ ಮನೆಗಳಲ್ಲಿ ಯಾವಾಗಲೂ ವಿದ್ಯುತ್‌ ಇರುತ್ತದೆ. ನಮ್ಮ ಮನೆಯ ಲೈನ್‌ನಲ್ಲಿ ಪದೇ ಪದೇ ವಿದ್ಯುತ್‌ ತೆಗೆಯುತ್ತಾರೆ. ಏನು ಸಮಸ್ಯೆ ಹೇಳಿ

ಫೀಡರ್‌ ಬೇರೆ ಆಗಿರುವುದರಿಂದ ಈ ಸಮಸ್ಯೆ ಇರಬಹುದು. ಆದರೂ ಪರಿಶೀಲಿಸುತ್ತೇವೆ.

***

l ತಿಮ್ಮಪ್ಪ, ಹೊಳಲ್ಕೆರೆ
ನೀರಾವರಿಗೆ ರಾತ್ರಿ 2 ಗಂಟೆ ಮಾತ್ರ ಕರೆಂಟ್ ಕೊಡ್ತಾರೆ. ಏಕೆ ಹೀಗೆ?

ಚಿತ್ರದುರ್ಗದಿಂದ ಈಗ ಬರುತ್ತಿರುವುದು ಸಿಂಗಲ್‌ ಸರ್ಕ್ಯೂಟ್‌. ಅದನ್ನು ಡಬಲ್‌ ಸರ್ಕ್ಯೂಟ್‌ ಮಾಡಲಾಗುತ್ತಿದೆ. ಮುಂದೆ ಈ ಸಮಸ್ಯೆ ಇರಲಾರದು.

***

l ಪ್ರಕಾಶ್ ಶೆಟ್ಟಿ, ವೆಂಕಟಾಪುರ
15 ದಿನವಾಯಿತು, ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ದಿನಕ್ಕೆ 3–4 ಗಂಟೆ ಇದ್ದರೆ ಹೆಚ್ಚು. ಏಕೆ ಹೀಗೆ?

ಅಲ್ಲಿ ಬೆಸ್ಕಾಂನ ಮಾದರಿ ಉಪವಿಭಾಗದ ಕೆಲಸ ನಡೆಯುತ್ತಿದೆ.ಮೆಟ್ರೊ ಕಾಮಗಾರಿಯೂ ನಡೆಯುತ್ತಿದೆ. ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ.

***

l ಮಧುಸೂದನ ರಡ್ಡಿ, ಆನೇಕಲ್‌
ಹೊಸದಾಗಿ ಮನೆ ಕಟ್ಟಿಸಿದ್ದೇನೆ, ಶಾಶ್ವತ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ ಏಕೆ ?

ನೀವು ಸ್ವಾಧೀನಾನುಭವ ಪ್ರಮಾಣಪತ್ರ ಪಡೆದಿಲ್ಲದಿದ್ದರೆ ಶಾಶ್ವತ ಸಂಪರ್ಕ ಕೊಡಲು ಸಾಧ್ಯವಿಲ್ಲ. ಅದನ್ನು ಬೇಗ ಪಡೆದುಕೊಳ್ಳಿ.

***

l ರವಿಶಂಕರ್‌, ಹೊಳಲ್ಕೆರೆ
ಹೊಳಲ್ಕೆರೆಯಲ್ಲಿ ನೀರಾವರಿಗೆ ಸತತ 4 ಗಂಟೆ ವಿದ್ಯುತ್‌ ಕೊಡುತ್ತಿಲ್ಲ ಏಕೆ?

66 ಕೆ.ವಿ. ಲೈನ್‌ ಓವರ್‌ಲೋಡ್‌ ಆಗಿದೆ. ಬದಲಿ ವ್ಯವಸ್ಥೆ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಏಳು ಗಂಟೆ ವಿದ್ಯುತ್ ನೀಡಬಹುದು.

***

l ಉಮೇಶ, ಹರಿಹರ
ಅಕ್ರಮ ಸಕ್ರಮ ಟಿ.ಸಿ ಅಳವಡಿಕೆ ಮಾಡುವುದು ಯಾವಾಗ?

ಅಲ್ಲಿ ಇರುವುದು ಒಂದು ಟಿ.ಸಿಗೆ 2 ಪಂಪ್‌ಸೆಟ್‌ ನಿಯಮ. ನೀವು ತತ್ಕಾಲ್‌ನಲ್ಲಿ ಟಿ.ಸಿ ಹಾಕಿಸಿಕೊಂಡರೆ ನಿಮ್ಮ ಸರದಿಗಾಗಿ ಕಾಯುವ ಅಗತ್ಯ ಇಲ್ಲ.

***

l ರವಿಕುಮಾರ್‌, ಚಿಕ್ಕಬಾಣಾವರ
ಇಲ್ಲಿ ಆಗಾಗವಿದ್ಯುತ್ ಕೈಕೊಡುತ್ತಲೇ ಇರುತ್ತದೆ. ಸಮಸ್ಯೆ ಬಗೆಹರಿಸಿ

ಅಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಹಾಕಿಸಿಕೊಡುತ್ತೇವೆ.

***

l ಮಹೇಂದ್ರ, ಹೊಸಕೋಟೆ
ಟಿ.ಸಿ ಸುಟ್ಟು ಹೋಗಿದೆ. ಬದಲಾವಣೆ ಮಾಡುತ್ತಿಲ್ಲ. ಲೈನ್‌ಮ್ಯಾನ್‌ಗಳು ಲಂಚ ಕೇಳುತ್ತಾರೆ.

ಲೈನ್‌ಮ್ಯಾನ್‌ಗಳಿಗೆ ಲಂಚ ಕೊಡಲು ಹೋಗಬೇಡಿ. ಗ್ರಾಮೀಣ ಭಾಗದಲ್ಲಿ 72 ಗಂಟೆಯೊಳಗೆ, ನಗರ ಪ್ರದೇಶಗಳಲ್ಲಿ 24 ಗಂಟೆಯೊಳಗೆ ಟಿ.ಸಿ ದುರಸ್ತಿ ಮಾಡಿಕೊಡಲೇಬೇಕು. ಸಮಸ್ಯೆ ಎದುರಾದರೆ ನಮ್ಮನ್ನು ಸಂಪರ್ಕಿಸಿ.

***

l ಜಯಣ್ಣ, ನೆಲಮಂಗಲ
ವಿದ್ಯುತ್‌ ಕಳ್ಳತನ ಆಗುತ್ತಿದೆ, ಏನಾದರೂ ಕ್ರಮ ಕೈಗೊಳ್ಳುತ್ತೀರಾ?

ನಮಗೆ ಇದರ ಬಗ್ಗೆ ಮಾಹಿತಿ ಕೊಡಿ, ವಿಚಕ್ಷಣ ದಳದವರು ಕ್ರಮ ಕೈಗೊಳ್ಳುತ್ತಾರೆ. ಯಾರೇ ಆಗಲಿ, ಇಂತಹ ಮಾಹಿತಿ ಕೊಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು. ಅವರಿಗೆ ಇನಾಮು ಕೂಡಾ ಕೊಡಲಾಗುವುದು.

***

l ವೀರಪ್ಪ, ಹೊಳಲ್ಕೆರೆ
ಕೊಳವೆ ಬಾವಿ ಹಾಕಿಸಿದ್ದೇವೆ. ಒಂದು ಪಂಪ್‌ಸೆಟ್‌ಗೆ ಒಂದು ಟಿ.ಸಿ ಕೊಡುತ್ತೀರಾ?

ಅಲ್ಲಿ ಒಂದು ಪಂಪ್‌ಗೆ ಒಂದು ಟಿ.ಸಿ ಅವಕಾಶ ಇಲ್ಲ.

***

l ಲೋಕೇಶ್‌,ಪೀಣ್ಯ
ಪಾದಚಾರಿ ಮಾರ್ಗದ ಮೇಲೆಯೇ ವಿದ್ಯುತ್ ಪರಿವರ್ತಕ ಇದೆ. ಬಹಳ ತೊಂದರೆಯಾಗುತ್ತಿದೆ.

ಪಾದಚಾರಿ ಮಾರ್ಗಗಳಲ್ಲಿ ಇದೀಗ ವಿಶೇಷ ವಿನ್ಯಾಸದ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ. ಇವು ಸ್ವಲ್ಪ ಎತ್ತರದಲ್ಲಿ ಇರುತ್ತವೆ. ಬೆಂಗಳೂರಿನಲ್ಲಿ ಈಗಾಗಲೇ ಇಂತಹ 3 ಸಾವಿರಕ್ಕಿಂತ ಹೆಚ್ಚು ಟಿ.ಸಿ.ಗಳನ್ನು ಅಳವಡಿಸಿದ್ದೇವೆ. ಪೀಣ್ಯದಲ್ಲೂ ಅಳವಡಿಸುತ್ತೇವೆ.

***

l ವಿಜಯಕುಮಾರ್,ಚಂದ್ರಾ ಲೇಔಟ್‌
ನಿರ್ಮಾಣ ಹಂತದ ಕಟ್ಟಡಕ್ಕೆ ಮೊದಲೇ ಹಣಪಡೆದು ನೀಡುವ ತಾತ್ಕಾಲಿಕ ವಿದ್ಯುತ್‌ ಸಂಪರ್ಕ 28 ದಿನಕ್ಕೊಮ್ಮೆ ನವೀಕರಿಸುವುದಿಲ್ಲ ಏಕೆ?

ನೀವು ಪ್ರಿಪೇಯ್ಡ್‌ ಮೀಟರ್ ಹೊಂದಿರುವುದರಿಂದ ಒಂದು ವರ್ಷದ ಅವಧಿಗೆ ಸಂಪರ್ಕ ಕೊಡಬಹುದು. ಫೋಟೊ ತೋರಿಸಿ ರಿನೀವಲ್‌ ಮಾಡುವ ವ್ಯವಸ್ಥೆಯೂ ಪ್ರಿಪೇಯ್ಡ್‌ ಮೀಟರ್ ವೇಳೆ ಅಗತ್ಯವಿಲ್ಲ. ಗುತ್ತಿಗೆದಾರರು ಇದಕ್ಕಾಗಿ ₹ 300, ₹500 ದುಡ್ಡು ಪಡೆಯುವ ಪ್ರಮೇಯವೂ ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.