ADVERTISEMENT

ಬೆಳ್ಳಕ್ಕಿ ಮರಿಗಳ ಸಾವು

ಹಿಕ್ಕೆ ಹಾಕುತ್ತವೆ ಎಂದು ಕೊಂಬೆಗಳನ್ನೇ ಕಡಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:59 IST
Last Updated 14 ಸೆಪ್ಟೆಂಬರ್ 2021, 17:59 IST
ಬೆಳ್ಳಕ್ಕಿಗಳು ಗೂಡು ಕಟ್ಟಿದ್ದ ಮರವು ಕೊಂಬೆಗಳಿಲ್ಲದೆ ಬೋಳಾಗಿದೆ
ಬೆಳ್ಳಕ್ಕಿಗಳು ಗೂಡು ಕಟ್ಟಿದ್ದ ಮರವು ಕೊಂಬೆಗಳಿಲ್ಲದೆ ಬೋಳಾಗಿದೆ   

ಮೈಸೂರು: ಟಿ.ನರಸೀಪುರ ತಾಲ್ಲೂಕಿನ ಕುಪ್ಯ ಗ್ರಾಮದಲ್ಲಿ ಮರದ ಕೊಂಬೆಗಳನ್ನು ಏಕಾಏಕಿ ಕತ್ತರಿಸಿದರಿಂದ ಬೆಳ್ಳಕ್ಕಿ (ಲಿಟಲ್ ಇಗ್ರೆಟ್) ಮರಿಗಳು ನೆಲಕ್ಕೆ ಬಿದ್ದು ಮೃತಪಟ್ಟಿವೆ.

‘ಪಕ್ಷಿಗಳು ಹಿಕ್ಕೆ ಹಾಕಿ ಅರಳಿಕಟ್ಟೆಯನ್ನು ಗಲೀಜು ಮಾಡುತ್ತವೆ’ ಎಂಬ ಕಾರಣಕ್ಕೆ ಗ್ರಾಮದ ಕೆಲವರು ಕೊಂಬೆಗಳನ್ನು ಕತ್ತರಿಸಿದ್ದಾರೆ. ಗಾಯಗೊಂಡು ನರಳುತ್ತಿದ್ದ ಕೆಲ ಮರಿಗಳನ್ನು ಅಲ್ಲಿಯೇ ಸುಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪ್ರಗತಿ ಬರ್ಡ್ ಚಾರಿಟಬಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಅಜಯಕುಮಾರ್ ಜೈನ್, ಉಳಿದ ಮರಿಗಳನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ.

ADVERTISEMENT

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಇದು ಬೆಳ್ಳಕ್ಕಿಗಳು ಗೂಡುಕಟ್ಟಿ ಮರಿ ಮಾಡುವ ಕಾಲ. ಹಾರಲಾಗದ ಹಾಗೂ ಹಾರಲು ಕಲಿಯುತ್ತಿದ್ದ 14 ಪಕ್ಷಿಗಳಕಾಲು ಹಾಗೂ ರೆಕ್ಕೆಗಳು ಮುರಿದಿವೆ’ ಎಂದು ಹೇಳಿದರು.

‘ಈ ಕುರಿತು ಪರಿಶೀಲಿಸಲು ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ ಕರಿಕಾಳನ್ ತಿಳಿಸಿದರು.

‘ಪಕ್ಷಿ ವೀಕ್ಷಣೆ ಹಾಗೂ ಸಂರಕ್ಷಣೆಯ ಬಗ್ಗೆ ಕಾಳಜಿಯುಳ್ಳ ತಜ್ಞರು, ಕಾರ್ಯಕರ್ತರ ತವರು ಎಂದೇ ಹೆಸರಾದ ಮೈಸೂರಿಗೆ ಸಮೀಪದಲ್ಲೇ ಪಕ್ಷಿಗಳ ಕಗ್ಗೊಲೆ ನಡೆದಿರುವುದು ವಿಪರ್ಯಾಸ’ ಎಂದು ಪಕ್ಷಿತಜ್ಞ ಕೆ.ಮನು, ತನುಜ ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.