ADVERTISEMENT

₹850 ಕೋಟಿ ಮೌಲ್ಯದ ಬಿಟ್‌ ಕಾಯಿನ್‌ ವರ್ಗ: ಜಾಮೀನಿಗೆ ನಕಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 0:21 IST
Last Updated 26 ಜುಲೈ 2024, 0:21 IST
ಬಿಟ್‌ ಕಾಯಿನ್‌-ಪ್ರಾತಿನಿಧಿಕ ಚಿತ್ರ
ಬಿಟ್‌ ಕಾಯಿನ್‌-ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಅಂದಾಜು ₹850 ಕೋಟಿ ಮೌಲ್ಯದ ಬಿಟ್‌ ಕಾಯಿನ್‌ಗಳನ್ನು ತಮ್ಮ ವೈಯಕ್ತಿಕ ಡೆಸ್ಕ್‌ಟಾಪ್‌ಗೆ ವರ್ಗಾವಣೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ಡಿ.ಎಂ.ಪ್ರಶಾಂತ್ ಬಾಬು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. 

ಈ ಸಂಬಂಧ ಡಿ.ಎಂ.ಪ್ರಶಾಂತ್ ಬಾಬು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಎಫ್‌ಎಸ್‌ಎಲ್‌ ಮತ್ತು ಸಿ–ಡಾಕ್‌ ವರದಿಗಳ ಅನುಸಾರ ಅರ್ಜಿದಾರರ ವಿರುದ್ಧದ ಆರೋಪಗಳ ತನಿಖೆಯ ಅಗತ್ಯವಿದೆ’ ಎಂಬ ಅಭಿಪ್ರಾಯದೊಂದಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

‘ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆ. ಈ ಅರ್ಜಿಯನ್ನು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿರುವ ಕಾರಣ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿ ಪ್ರಶಾಂತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದಲ್ಲಿನ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಎಸ್ಐಟಿ ಪರ ವಾದ ಮಂಡಿಸಿದ್ದರು.

ADVERTISEMENT

‘ಬಿಟ್‌ ಕಾಯಿನ್‌ಗಳ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಈ ದೂರಿನ ತನಿಖೆ ವೇಳೆ ಪ್ರಶಾಂತ್ ಬಾಬು ಆರೋಪಿಗಳ ಜೊತೆ ಸೇರಿ ಅಂದಿನ ದಿನಗಳ ಮೌಲ್ಯಕ್ಕೆ ಅನುಗುಣವಾಗಿ ₹ 850 ಕೋಟಿ ಮೊತ್ತದ 4 ಸಾವಿರ ಬಿಟ್‌ ಕಾಯಿನ್‌ಗಳನ್ನು ತಮ್ಮ ವೈಯಕ್ತಿಕ ಡೆಸ್ಕ್‌ಟಾಪ್‌ಗೆ ವರ್ಗಾವಣೆ ಮಾಡಿಕೊಂಡಿದ್ದರು’ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿತ್ತು. ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಬಾಬು ಸಿಸಿಬಿಯ ತಾಂತ್ರಿಕ ಸಹಕಾರ ಕೇಂದ್ರದ ಉಸ್ತುವಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.