ADVERTISEMENT

ಮತದಾರರ ಪಟ್ಟಿಯಲ್ಲಿ ಹೆಸರು ಕಣ್ಮರೆ–ಕೋರ್ಟ್‌ಗೆ ಬಿಜೆಪಿ

ಬಿಬಿಎಂಪಿ ಕುತಂತ್ರವೇ ಕಾರಣ: ಆರ್‌.ಅಶೋಕ್‌ ಆರೋಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 17:12 IST
Last Updated 19 ಏಪ್ರಿಲ್ 2019, 17:12 IST

ಬೆಂಗಳೂರು: ‘ನಗರದ ಒಂದೊಂದು ಕ್ಷೇತ್ರದಲ್ಲೂ 50 ಸಾವಿರದಿಂದ 60 ಸಾವಿರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಲಿದ್ದೇವೆ’ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್‌ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಸರು ಕೈಬಿಟ್ಟ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ಕುತಂತ್ರವಿದೆ. ಚುನಾವಣಾ ಆಯೋಗ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ದೋಷದ ಬಗ್ಗೆ ಆಯೋಗ ಸ್ಪಷ್ಟನೆ ನೀಡಬೇಕು. ಈ ಕುರಿತಂತೆ ಆಯೋಗಕ್ಕೆ ನಮ್ಮ ಪಕ್ಷ ದೂರು ನೀಡಲಿದೆ’ ಎಂದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದವರ ಹೆಸರುಗಳು ಈ ಸಲ ಡಿಲೀಟ್‌ ಆಗಿವೆ. ಏಪ್ರಿಲ್‌ 16ರವರೆಗೆ ಈ ಮತದಾರರ ಹೆಸರುಗಳು ಪಟ್ಟಿಯಲ್ಲಿ ಇದ್ದವು. ಏಕಾಏಕಿ ಡಿಲೀಟ್‌ ಆಗಲು ಪಾಲಿಕೆ ಅಧಿಕಾರಿಗಳೇ ಕಾರಣ. ಕೆಲವು ಕಡೆಗಳಲ್ಲಿ ಮನೆಯ ಯಜಮಾನನ ಹೆಂಡತಿ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿದ್ದರೆ, ಇನ್ನೂ ಹಲವು ಕಡೆಗಳಲ್ಲಿ ಪತಿಯ ಹೆಸರನ್ನು ಡಿಲೀಟ್‌ ಮಾಡಿದ್ದಾರೆ. ಮತ ಹಾಕಲೆಂದು ಅಮೆರಿಕದಿಂದ ಬಂದವರಿಗೂ ಹಕ್ಕು ಚಲಾವಣೆಗೆ ಅವಕಾಶ ನೀಡಿಲ್ಲ. ವಿದ್ಯಾವಂತ ಹಾಗೂ ಬಿಜೆಪಿ ಪರ ಒಲವಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ’ ಎಂದು ಅವರು ದೂರಿದರು.

ADVERTISEMENT

ಪಟ್ಟಿಯಿಂದ ಹೆಸರು ತೆಗೆದು ಹಾಕುವ ಮೊದಲು ಅಧಿಕಾರಿಗಳು ಯಾವುದೇ ಸೂಚನೆ ನೀಡಿಲ್ಲ. ಇದಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಹೇಳಿದರು.

10ರಲ್ಲಿ ಗೆಲುವು: ‘ಮೊದಲ ಹಂತದ ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಪಕ್ಷವು 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಬಿಜೆಪಿ ಬೆಂಬಲದೊಂದಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್‌ ಗೆಲ್ಲಲಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಕಚ್ಚಾಟದಿಂದ ಹಾಸನದಲ್ಲಿ ನಮ್ಮ ಪಕ್ಷದ ಗೆಲುವಿನ ಸಾಧ್ಯತೆ ನಿಚ್ಚಳವಾಗಿದೆ’ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಅವರಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಅದಕ್ಕೆ ಅವರು ಮುಹೂರ್ತ (ಟೈಂ ಬಾಂಬ್‌) ನಿಗದಿಪಡಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.