ADVERTISEMENT

ಸಿದ್ದರಾಮಯ್ಯ ಅವರೇ ಎಸ್‌ಐಟಿ ಇಲ್ಲದಿದ್ದರೆ, ನೀವು ಸಹ ಕಂಬಿ ಎಣಿಸಬೇಕಿತ್ತು: BJP

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2025, 13:29 IST
Last Updated 10 ಸೆಪ್ಟೆಂಬರ್ 2025, 13:29 IST
<div class="paragraphs"><p>ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಎಸ್‌ಐಟಿ ರಚಿಸಿಕೊಂಡು ಕ್ಲೀನ್‌ ಚಿಟ್‌ ಪಡೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರೇ, ಒಂದು ವೇಳೆ ಎಸ್‌ಐಟಿ ಇಲ್ಲದಿದ್ದರೆ, ಈಗ ನೀವು ಸಹ ಕಂಬಿ ಎಣಿಸಬೇಕಿತ್ತು ಎಂದು ಬಿಜೆಪಿ ಲೇವಡಿ ಮಾಡಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, 'ಕಾಂಗ್ರೆಸ್ ಶಾಸಕರ ಜೈಲ್‌ ಭರೋ ಚಳುವಳಿ ಯಶಸ್ವಿಯಾಗಿ ನಡೆಯುತ್ತಿದ್ದು, ಈಗಾಗಲೇ ನಾಲ್ವರು ಶಾಸಕರು ಜೈಲಿನ ಕಂಬಿ ಎಣಿಸಿದ್ದಾರೆ. ಶೀಘ್ರದಲ್ಲಿಯೇ ಇವರನ್ನು ಮತ್ತಷ್ಟು ಕಾಂಗ್ರೆಸ್‌ ಶಾಸಕರು ಕೂಡಿಕೊಂಡರೂ ಅಚ್ಚರಿಯಿಲ್ಲ' ಎಂದಿದೆ.

ADVERTISEMENT

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಕ್ಲೀನ್ ಚಿಟ್‌

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರ ತಪ್ಪು ಇಲ್ಲ ಎಂದು ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗ ವರದಿ ನೀಡಿದೆ.

ವರದಿಯ ಮುಖ್ಯ ಅಂಶಗಳು

  • ಕೇರ್ಗಳ್ಳಿ ಗ್ರಾಮದ ಸ.ನಂ 115/22 ಮತ್ತು 115/42 ಜಮೀನಿಗೆ ಸಂಬಂಧಿಸಿದಂತೆ ಡಿನೋಟಿಫೈ ಮಾಡಲಾಗಿದ್ದರೂ ಮುಡಾದಿಂದ ಬಳಸಿಕೊಳ್ಳಲಾದ ಜಮೀನುಗಳ ಮಾಲೀಕರಿಗೆ ಪರಿಹಾರವಾಗಿ ನಿವೇಶನ ಹಂಚಿಕೆ ಮತ್ತು ಕೆಸರೆ ಗ್ರಾಮದ ಸ.ನಂ 464ರ ಜಮೀನಿನ ವಿಷಯದಲ್ಲಿ ಅಕ್ರಮ ಆಗಿದೆ ಎಂದು ಹೇಳಲು ಆಗುವುದಿಲ್ಲ

  •  ಡಿನೋಟಿಫೈ ಆದ ಜಮೀನುಗಳನ್ನು ಬಳಸಿಕೊಂಡ ಸಂದರ್ಭದಲ್ಲಿ ನಿವೇಶನ ರೂಪದಲ್ಲಿ ಪರಿಹಾರ ಪಾವತಿಗಾಗಿ ಮುಡಾ ಅನುಸರಿಸಿದ ವಿಧಾನಗಳನ್ನು ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಡಿನೋಟಿಫೈ ಆದ ಜಮೀನುಗಳ ಮೇಲೆ ಮುಡಾಕ್ಕೆ ಯಾವುದೇ ಹಕ್ಕು ಮತ್ತು ಕಾನೂನುಬದ್ಧ ಸ್ವಾಧೀನವಿರುವುದಿಲ್ಲ

  • ಮುಡಾ ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳದ ಭೂಮಿಯನ್ನು ಬಳಸುವಾಗ ಮಾಡಿದ ವಿನ್ಯಾಸಗಳು ಮತ್ತು ಸೈಟ್‌ ರಚನೆಯಲ್ಲಿ ಹಾಗೂ ಡಿನೋಟಿಫೈ ಮಾಡದ ಭೂಮಿಯನ್ನು ಬಳಸುವಾಗ ಮಾಡಿದ
    ಅಕ್ರಮಗಳಿಂದಾಗಿ ಮುಡಾ ಆರ್ಥಿಕ ನಷ್ಟ ಅನುಭವಿಸಿದೆ. ಆದ್ದರಿಂದ, ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವುದರ ಜತೆಗೆ ಅಂತಹ ಅಕ್ರಮಗಳಿಗೆ ಕಾರಣರಾದ ಸಂಬಂಧಿತ ಅವಧಿಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳಿಂದ ಆರ್ಥಿಕ ನಷ್ಟ ವಸೂಲಿ ಮಾಡಬೇಕು

  •  ಬಡಾವಣೆಗಳ ರಚನೆಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್‌ ವಿಭಾಗದಿಂದ ಯಾವುದೇ ಮೇಲ್ವಿಚಾರಣೆ ಅಥವಾ ನಿಗಾವಹಿಸಿಲ್ಲ. ಇದು ಸ್ವಾಧೀನಪಡಿಸಿಕೊಳ್ಳದೆ ಬಡಾವಣೆ ರಚನೆಗೆ ಜಮೀನು ಬಳಸಿಕೊಳ್ಳಲು ಕಾರಣವಾಗಿದೆ. ರಸ್ತೆಗಳ ರಚನೆಗಾಗಿ ಸ್ವಾಧೀನಪಡಿಸಿಕೊಳ್ಳದೆ ಜಮೀನನ್ನು ಬಳಸಿಕೊಳ್ಳುವ ವಿಚಾರದಲ್ಲೂ ಮುಡಾದ  ಸಂಬಂಧಪಟ್ಟ ವಿಭಾಗಗಳಿಂದ ಮೇಲ್ವಿಚಾರಣೆ ಕೊರತೆ ಎದ್ದುಕಾಣುತ್ತದೆ. ಇದು ಮೂರರಿಂದ ನಾಲ್ಕು ದಶಕಗಳ ನಂತರ ಪರಿಹಾರ ಪಾವತಿಗೆ ಕಾರಣವಾಗಿದ್ದು, ಮುಡಾಗೆ ಭಾರಿ ಆರ್ಥಿಕ ನಷ್ಟ ಉಂಟು ಮಾಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.