ADVERTISEMENT

ಕನಕಪುರಕ್ಕೆ ಕಾಲಿಟ್ಟರೆ ನನ್ನ ಮೇಲೆ ದಾಳಿ: ಯತ್ನಾಳ್‌ ಆತಂಕ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಹೈಕೋರ್ಟ್‌ ತುರ್ತು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 16:14 IST
Last Updated 18 ಮಾರ್ಚ್ 2024, 16:14 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕೋರ್ಟ್‌ ವಿಚಾರಣೆಗಾಗಿ ನಾನು ಕನಕಪುರಕ್ಕೆ ಭೇಟಿ ನೀಡಿದರೆ ನನ್ನ ಮೇಲೆ ದಾಳಿಯಾಗುವ ಸಂಭವವಿದೆ’ ಎಂದು ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ತಮ್ಮ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸಲ್ಲಿಸಿರುವ ಅಸಲು ದಾವೆಯೊಂದನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಯತ್ನಾಳ್‌ ಸಲ್ಲಿಸಿರುವ ಸಿವಿಲ್‌ ದಾವೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿ ಡಿ.ಕೆ.ಶಿವಕುಮಾರ್ ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ವಿಚಾರಣೆ ವೇಳೆ ಯತ್ನಾಳ್‌ ಪರ ವಕೀಲರು, ’ಕನಕಪುರ ನ್ಯಾಯಾಲಯದ ವ್ಯಾಪ್ತಿಯಲ್ಲಿ ದಾವೆಯ ವಿಚಾರಣೆ ನಡೆಸುವುದಕ್ಕೆ ಸಕಾರಣವಿಲ್ಲ. ಹೀಗಾಗಿ, ಕನಕಪುರ ಹಿರಿಯ ಸಿವಿಲ್‌ ಕೋರ್ಟ್‌ ಮತ್ತು ಜೆಎಂಎಫ್‌ಸಿಯಲ್ಲಿ ಹೂಡಲಾಗಿರುವ ಅಸಲು ದಾವೆಯ ವಿಚಾರಣೆಗೆ ತಡೆ ನೀಡಬೇಕು’ ಎಂದು ಮಂಡಿಸಿದ ವಾದವನ್ನು ಮನ್ನಿಸಿದ ನ್ಯಾಯಪೀಠ, ತುರ್ತು ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.

ADVERTISEMENT

ಪ್ರಕರಣವೇನು?: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿನ 2019ರ ಜೂನ್ 23ರಂದು ಯತ್ನಾಳ್ ಅವರು ವಿಜಯಪುರದಲ್ಲಿ, ‘ಡಿ.ಕೆ.ಶಿವಕುಮಾರ್ ನಮ್ಮ (ಬಿಜೆಪಿ) ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಣೆ ಕೋರಿದ್ದಾರೆ. ಈ ಸಂಬಂಧ ನಮ್ಮ ಕೇಂದ್ರ ಸಚಿವರ ಮೂಲಕ ಲಾಬಿ ಮಾಡಿದ್ದಾರೆ. ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ತಮ್ಮ ವಿರೋಧ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆಂಬುದು ನನಗೆ ಗೊತ್ತಿದೆ‘ ಎಂದು ಹೇಳಿದ್ದರು. ಇದನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು.

‘ಈ ಹೇಳಿಕೆಯಿಂದ ನನ್ನ ಘನತೆ ಮತ್ತು ವರ್ಚಸ್ಸಿಗೆ ಹಾನಿಯಾಗಿದ್ದು ₹204 ಕೋಟಿ ಪರಿಹಾರ ತುಂಬಿಕೊಡಲು ಪ್ರತಿವಾದಿ ಯತ್ನಾಳ್‌ ಅವರಿಗೆ ಆದೇಶಿಸಬೇಕು’ ಎಂದು ಕೋರಿ ಶಿವಕುಮಾರ್, ಕನಕಪುರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಇದನ್ನು ಆಕ್ಷೇಪಿಸಿರುವ ಯತ್ನಾಳ್‌, ‘ ನನಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಶಿವಕುಮಾರ್‌ ಈ ದಾವೆಯನ್ನು ಕನಕಪುರದ ನ್ಯಾಯಾಲಯದಲ್ಲಿ ಹೂಡಿದ್ದಾರೆ. ವಿಜಯಪುರದ ಶಾಸಕನಾದ ನಾನು ಅಲ್ಲಿ ಹೇಳಿಕೆ ನೀಡಿದ್ದು, ಇಲ್ಲಿ ದಾವೆ ಹೂಡಲಾಗಿದೆ. ಎರಡು ಪಟ್ಟಣಗಳ ಮಧ್ಯೆ 565 ಕಿ.ಮೀ.ಅಂತರವಿದ್ದು, ಇಷ್ಟೊಂದು ಸುದೀರ್ಘ ಅಂತರವನ್ನು ಕ್ರಮಿಸುವುದು ಕಷ್ಟ. ಶಿವಕುಮಾರ್  ಅತ್ಯಂತ ಬಲಾಢ್ಯರು ಮತ್ತು ಪ್ರಭಾವಿಗಳಿದ್ದಾರೆ. ಪ್ರಕರಣದಲ್ಲಿನ ಸಾಕ್ಷ್ಯ ತಿರುಚುವ ಸಾಧ್ಯತೆ ಇದೆ.ಈ ಎರಡೂ ಕಾರಣದಿಂದ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಬೇಕು’ ಎಂದು  ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.