ADVERTISEMENT

ಪರಿಶಿಷ್ಟರಿಗೆ ಬಿಜೆಪಿ ಸರ್ಕಾರ ದ್ರೋಹ ಆರೋಪ: ಕಾಂಗ್ರೆಸ್‌ ಪ್ರತಿಭಟನೆ

ಕಾಂಗ್ರೆಸ್‌ನಿಂದ ‘ರಾಜಭವನ ಚಲೋ’ l ಪ್ರತಿಭಟನಕಾರರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 19:26 IST
Last Updated 24 ಮಾರ್ಚ್ 2023, 19:26 IST
ರಾಜಭವನ ಚಲೋ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್‌, ಜಿ. ಪರಮೇಶ್ವರ, ಸಿದ್ದರಾಮಯ್ಯ, ಸಲೀಂ ಅಹ್ಮದ್‌ ಇದ್ದರು
ರಾಜಭವನ ಚಲೋ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್‌, ಜಿ. ಪರಮೇಶ್ವರ, ಸಿದ್ದರಾಮಯ್ಯ, ಸಲೀಂ ಅಹ್ಮದ್‌ ಇದ್ದರು   

ಬೆಂಗಳೂರು: ‘ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ರಾಜ್ಯ ಬಿಜೆಪಿ ಸರ್ಕಾರ ದ್ರೋಹ ಮಾಡುತ್ತಿದೆ’ ಎಂದು ಆರೋಪಿಸಿ ಶುಕ್ರವಾರ ‘ರಾಜಭವನ ಚಲೋ’ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

ನಂತರ ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರು, ‘ಶೋಷಿತ ಸಮುದಾಯಗಳಿಗೆ ಮೋಸ ಮಾಡಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಯಾತ್ರೆ ಬಾಳೆಕುಂದ್ರಿ ವೃತ್ತದ ಬಳಿ ತಲುಪುತ್ತಿದ್ದಂತೆ ತಡೆದ ಪೊಲೀಸರು, ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು.

ADVERTISEMENT

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ರಾಜ್ಯದ ಜನರಿಗೆ ದ್ರೋಹ ಬಗೆದಿರುವ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬಾರದು. ಸರ್ಕಾರ ವನ್ನು ತಕ್ಷಣ ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು.

‘ಮೀಸಲಾತಿ ಹೆಚ್ಚಿದ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಿದ ಕಾರಣಕ್ಕೆ ನಾವು ಹೋರಾಟಕ್ಕೆ ಮುಂದಾಗಿರುವ ಮಾಹಿತಿ ಸಿಗುತ್ತಿದ್ದಂತೆ ಗುರುವಾರ ರಾತ್ರಿ ಮುಖ್ಯ ಕಾರ್ಯದರ್ಶಿ ಮೂಲಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಪತ್ರ ಬರೆದಿದೆ. ಈ ಸರ್ಕಾರಕ್ಕೆ ಚುನಾವಣೆಗಿಂತ ಈ ದಲಿತ ಸಮುದಾಯದವರ ಬಗ್ಗೆ ಕಾಳಜಿ ಇದ್ದರೆ, ಮೀಸಲಾತಿ ಹೆಚ್ಚಳದ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕಿದ
ತಕ್ಷಣವೇ 26 ಸಂಸದರನ್ನು ಕರೆದುಕೊಂಡು ಡಬಲ್ ಎಂಜಿನ್ ಸರ್ಕಾರದ ಮೂಲಕ ಒತ್ತಡ ಹಾಕಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಸಂವಿಧಾನ 9ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕಿತ್ತು. ಆದರೆ, ಈಗ ನಮ್ಮ ಹೋರಾಟಕ್ಕೆ ಹೆದರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.