ADVERTISEMENT

ಚೀನಾದ ಕಮ್ಯುನಿಸ್ಟ್‌ ಪಕ್ಷಕ್ಕಿಂತ ಬಿಜೆಪಿ ದೊಡ್ಡದು: ಶೋಭಾ ಕರಂದ್ಲಾಜೆ

ಸುಳ್ಳು ಹೇಳುವ ಕಾಂಗ್ರೆಸ್‌ ಮುಖಂಡರು ಹೇಗೆ ಸಾಯುತ್ತಾರೆ ಗೊತ್ತಾ: ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 12:43 IST
Last Updated 21 ನವೆಂಬರ್ 2021, 12:43 IST
ಮಂಡ್ಯದಲ್ಲಿ ನಡೆದ ಜನ ಸ್ವರಾಜ್‌ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು. ಕೆ.ಸಿ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌, ಕೆ.ಜೆ.ವಿಜಯ್‌ಕುಮಾರ್‌ ಇದ್ದಾರೆ
ಮಂಡ್ಯದಲ್ಲಿ ನಡೆದ ಜನ ಸ್ವರಾಜ್‌ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು. ಕೆ.ಸಿ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌, ಕೆ.ಜೆ.ವಿಜಯ್‌ಕುಮಾರ್‌ ಇದ್ದಾರೆ   

ಮಂಡ್ಯ: ‘ಬಿಜೆಪಿಯು ಪ್ರಪಂಚದ ಅತ್ಯಂತ ದೊಡ್ಡ ಪಕ್ಷವಾಗಿದೆ, ಚೀನಾದ ಕಮ್ಯುನಿಸ್ಟ್‌ ಪಕ್ಷಕ್ಕಿಂತಲೂ ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಭಾನುವಾರ ನಡೆದ ಜನ ಸ್ವರಾಜ್‌ ಯಾತ್ರೆಯಲ್ಲಿ ಮಾತನಾಡಿದ ಅವರು ‘ಪ್ರಧಾನಿ ಮೋದಿ ಅವರು ವಿಶ್ವನಾಯಕನಾಗಿ ಬೆಳೆದಿದ್ದು, ಬಿಜೆಪಿಯನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಯುಪಿಎ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್‌ ಅವರು ಭ್ರಷ್ಟಾಚಾರದಲ್ಲಿ ವಿಶ್ವದಲ್ಲಿಯೇ ನಂಬರ್‌ ಒನ್‌ ಆಗಿದ್ದರು. ಆದರೆ ನರೇಂದ್ರ ಮೋದಿ ಅವರು 7 ವರ್ಷಗಳಿಂದ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲದೇ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ’ ಎಂದರು.

‘ಮನಹೋಹನ್‌ ಸಿಂಗ್‌ ಪ್ರಧಾನಿಯಾಗಿ ವಿದೇಶಗಳಿಗೆ ಭೇಟಿ ನೀಡಿದಾಗ ಅವರಿಗೆ ಗೌರವ ಸಿಗುತ್ತಿರಲಿಲ್ಲ. ಸ್ವಾಗತ ಕೋರಲು ಯಾರೂ ಬರುತ್ತಿರಲಿಲ್ಲ, ನಮಸ್ಕಾರ ಮಾಡುತ್ತಿರಲಿಲ್ಲ. ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದ ಪ್ರಧಾನಿಯಾಗಿ ವಿದೇಶ ಪ್ರವಾಸ ಮಾಡುತ್ತಿರಲಿಲ್ಲ. ಕೇವಲ ಭಾರತದ ಪ್ರಧಾನಿಯಾಗಿ ಎಲ್ಲೋ ಒಂದು ಮೂಲೆಯಲ್ಲಿ ನಿಂತು ಬರುತ್ತಿದ್ದರು. ಆದರೆ ಮೋದಿ ಅವರು ವಿದೇಶ ಪ್ರವಾಸಕ್ಕೆ ತೆರಳಿದರೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತದೆ’ ಎಂದರು.

ADVERTISEMENT

‘ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿ ಅಭ್ಯರ್ಥಿಯಾದಾಗ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಘೋಷಣೆ ಮಾಡಿದ್ದರು. ಅವರು ನುಡಿದಂತೆ ನಡೆದುಕೊಂಡಿದ್ದು, ವಿಶ್ವ ಮನ್ನಣೆ ಪಡೆದಿದ್ದಾರೆ. ಮೇಕ್‌ ಇನ್‌ ಇಂಡಿಯಾ ಯೋಜನೆ ಮೂಲಕ ಭಾರತೀಯ ಸೈನ್ಯ, ಭದ್ರತಾ ಪಡೆ, ಪೊಲೀಸರಿಗೆ ದೇಸಿ ಉತ್ಪಾದನೆಯ ಶಸ್ತ್ರಾಸ್ತ್ರ ನೀಡಿದ್ದಾರೆ’ ಎಂದರು.

ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ ‘ಸುಳ್ಳು ಹೇಳುವುದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆಗೆ ಬಿದ್ದಿದ್ದಾರೆ. ಸುಳ್ಳು ಹೇಳುವುದದಲ್ಲಿ ನೊಬೆಲ್‌ ಪ್ರಶಸ್ತಿ ಇಟ್ಟು ಸ್ಪರ್ಧೆ ನಡೆಸಿದರೆ ಸಿದ್ದರಾಮಯ್ಯ ಅವರೇ ಮೊದಲ ಬಹುಮಾನ ಪಡೆಯುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ನಮ್ಮ ಸರ್ಕಾರ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ಕೊಟ್ಟರೆ ಕಾಂಗ್ರೆಸ್‌ ಮುಖಂಡರು ಅಪಪ್ರಚಾರ ನಡೆಸಿದರು, ಲಸಿಕೆ ಪಡೆದರೆ ಗಂಡಸ್ತನ ಹೋಗುತ್ತದೆ ಎಂದೆಲ್ಲಾ ಪ್ರಚಾರ ಮಾಡಿದರು. ಈ ಕಾಂಗ್ರೆಸ್‌ ಮುಖಂಡರು ಹೇಗೆ ಸಾಯುತ್ತಾರೆ ಗೊತ್ತಾ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.