ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ‘ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯಲ್ಲಿ ₹15,000 ಕೊಟಿಯಷ್ಟು ಅಕ್ರಮವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿಯಿಂದ ಅಭಿಯಾನ ಆರಂಭಿಸಿದ್ದೇವೆ’ ಎಂದು ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲು ಅವಕಾಶವಿಲ್ಲ. ಹೀಗಿದ್ದೂ ಕಡ್ಡಾಯ ಮಾಡಲಾಗಿದೆ. ಜತೆಗೆ ಕಪ್ಪು ಪಟ್ಟಿಯಲ್ಲಿದ್ದ ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಲೋಕಾಯುಕ್ತ, ಮಹಾಲೇಖಪಾಲರಿಗೆ (ಸಿಎಜಿ) ದೂರು ನೀಡಿದ್ದೇವೆ’ ಎಂದರು.
‘ಈಗ ಹೊಸ ಸಂಪರ್ಕಗಳಿಗಷ್ಟೇ ಸ್ಮಾರ್ಟ್ ಮೀಟರ್ ಎನ್ನುತ್ತಿದ್ದಾರೆ. ಅದನ್ನು ಹಳೆಯ ಗ್ರಾಹಕರಿಗೂ ವಿಸ್ತರಿಸಿದರೆ, ಪ್ರತಿಯೊಬ್ಬರೂ ₹1.5 ಲಕ್ಷ ಪಾವತಿಸಬೇಕಾಗುತ್ತದೆ. 2.50 ಕೋಟಿ ಮೀಟರ್‌ಗಳಿಗೆ ಎಷ್ಟು ಮೊತ್ತವಾಗುತ್ತದೆ ಎಂಬುದನ್ನು ಊಹಿಸಿ’ ಎಂದರು.
‘ಇಂಧನ ಇಲಾಖೆಯಲ್ಲಿ ಲೆಕ್ಕಪರಿಶೋಧನೆಯೇ ಇಲ್ಲದಂತಾಗಿದೆ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದಲೇ ಲೋಕಾಯುಕ್ತ ಮತ್ತು ಸಿಎಜಿಗೆ ದೂರು ನೀಡಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸಲು ಆನ್‌ಲೈನ್ ಸಹಿ ಅಭಿಯಾನವನ್ನೂ ಆರಂಭಿಸಿದ್ದೇವೆ’ ಎಂದರು.
‘ಇಲ್ಲಿ ಖಜಾನೆ ಕಾಯಬೇಕಾದವರೇ ಲೂಟಿ ಹೊಡೆಯುತ್ತಿದ್ದಾರೆ. ಸದನದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದರೂ ಪ್ರಯೋಜನವಾಗಿಲ್ಲ. ಇದಕ್ಕೆಲ್ಲಾ ಹೋರಾಟವೇ ಮದ್ದು’ ಎಂದರು.
ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಧೀರಜ್ ಮುನಿರಾಜು ಅವರು ಅಶ್ವತ್ಥನಾರಾಯಣ ನೇತೃತ್ವದಲ್ಲಿ ಸೋಮವಾರ ಲೋಕಾಯುಕ್ತ ಎಸ್‌ಪಿಯನ್ನು ಭೇಟಿ ಮಾಡಿ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.