ADVERTISEMENT

ಗೂಂಡಾ ಕಾಯ್ದೆಯಡಿ ಶಾಸಕ ಜಮೀರ್‌ ಬಂಧಿಸಿ: ನಳಿನ್‌ ಕುಮಾರ್‌ ಕಟೀಲ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 11:16 IST
Last Updated 25 ಏಪ್ರಿಲ್ 2020, 11:16 IST
   

ಬೆಂಗಳೂರು: ‘ಪಾದರಾಯನಪುರ ಗಲಭೆಗೆ ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್ ಅವರೇ ಕಾರಣ. ಹೀಗಾಗಿ ಅವರ ವಿರುದ್ಧ ಗೂಂಡಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ಬಂಧಿಸಬೇಕು‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದ ನಿಯೋಗದ ಜೊತೆ ಶುಕ್ರವಾರ ಭೇಟಿಯಾದ ವೇಳೆ ಈ ಬೇಡಿಕೆ ಮುಂದಿಟ್ಟಿಡಲಾಗಿದೆ’ ಎಂದರು.

‘ಕೊರೊನಾ ಹರಡುತ್ತಿರುವ ಈ ತುರ್ತು ಸಂದರ್ಭದಲ್ಲಿ ಪಾದರಾಯನಪುರ ಗಲಾಟೆ ಅಕ್ಷಮ್ಯ. ಈ ಗಲಭೆಕೋರರ ವಿರುದ್ದ ಸರ್ಕಾರ ಈಗಾಗಲೇ ಸೂಕ್ತ ಕ್ರಮ ತೆಗೆದುಕೊಂಡಿದೆ. ಆದರೆ, ಇದಕ್ಕೆ ಕಾರಣವಾದ ಜಮೀರ್ ಅಹಮದ್ ಅವರ ಗೂಂಡಾ ಪ್ರವೃತ್ತಿಯ ವಿರುದ್ದಕ್ರಮ ತೆಗೆದುಕೊಳ್ಳಬೇಕಾಗಿದೆ‘ ಎಂದರು.

ADVERTISEMENT

ಕೊರೊನಾ ಹರಡುವಕೆ ನಿಯಂತ್ರಣ ಮತ್ತು ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಅವರು, ‘ಅಮೆರಿಕ, ಇಟಲಿ ದೇಶಗಳು ಕೊರೊನಾ ಕುರಿತು ಸೂಕ್ತ ಎಚ್ಚರಿಕೆ ವಹಿಸದ ಕಾರಣ ಅತಿಹೆಚ್ಚಿನ ಸಂಖ್ಯೆಯ ಸಾವು ನೋವು ಎದುರಿಸಿದೆ‘ ಎಂದರು.

‘ಆರಂಭದ ಹಂತದಲ್ಲೇ ಮೋದಿ ಉತ್ತಮವಾಗಿ ನಿರ್ವಹಣೆ ಮಾಡಿದ್ದರು. ಇವತ್ತು ಇಡೀ ಜಗತ್ತು ಭಾರತದ ಕಡೆ, ಮೋದಿ ತೆಗೆದುಕೊಳ್ಳುವ ತೀರ್ಮಾನದ ಕಡೆ ನೋಡುತ್ತಿದೆ. ಮೋದಿ ತೆಗೆದುಕೊಂಡ ತೀರ್ಮಾನಗಳಿಂದಾಗಿ ಮೂರನೇ ಸ್ಥಾನದಲ್ಲಿದ್ದ ಭಾರತ 11 ಸ್ಥಾನಕ್ಕೆ ಬಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ‘ ಎಂದರು.

‘ಕೊರೊನಾ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್‌ ಮತ್ತು ಸೀಲ್‌ಡೌನ್‌ ವಿಧಿಸಿರುವ ಪ್ರದೇಶಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಸೇವೆಯಲ್ಲಿ ತೊಡಗಿರುವವರ ಆರೋಗ್ಯದ ಬಗ್ಗೆಯೂ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಬಳಿ ಪಕ್ಷದ ನಿಯೋಗ ಆಗ್ರಹಿಸಿದೆ' ಎಂದರು.

‘ಶಾಲೆಗಳ ಮಧ್ಯಂತರ ರಜೆ ರದ್ದುಪಡಿಸಬೇಕು. ಖಾಸಗಿ ಶಾಲೆಗಳು ಶುಲ್ಕ ಕಟ್ಟುವಂತೆ ಒತ್ತಾಯಿಸದಂತೆ ಕ್ರಮ ತೆಗೆದುಕೊಳ್ಳಬೇಕು. ನರೇಗಾ ಯೋಜನೆಯಡಿ ಉದ್ಯೋಗ ಅವಕಾಶ ಹೆಚ್ಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇನ್ನಷ್ಟು ಸಕ್ರಿಯವಾಗಿ ಕೆಲಸ ಮಾಡುವಂತೆ ಸಲಹೆ ನೀಡಬೇಕು ಎಂದೂ ಮುಖ್ಯಮಂತ್ರಿ ಬಳಿ ಒತ್ತಾಯಿಸಲಾಗಿದೆ‘ ಎಂದೂ ಕಟೀಲ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.