ADVERTISEMENT

ತೈಲ ಬೆಲೆ ಏರಿಕೆ: ಬಿಜೆಪಿ ಸಮರ್ಥನೆ

ರಾಜ್ಯದಾದ್ಯಂತ ಇಂದು ಬಲಿದಾನ ದಿನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 22:49 IST
Last Updated 22 ಜೂನ್ 2021, 22:49 IST
ಎನ್‌.ರವಿಕುಮಾರ್
ಎನ್‌.ರವಿಕುಮಾರ್   

ಬೆಂಗಳೂರು: ಕಚ್ಚಾ ತೈಲದ ಬೆಲೆ ಏರಿಕೆಯಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇ ದಿನೇ ಏರಿಕೆ ಆಗುತ್ತಿದ್ದು, ಮತ್ತೊಂದು ಕಡೆ ಸುಂಕ ಇಳಿಸಲು ಸಾಧ್ಯವಿಲ್ಲದ ಪರಿಸ್ಥಿತಿಯೂ ನಿರ್ಮಾಣ ಆಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲೂ ಆಗಿತ್ತು. ಇದು ಹೊಸ ವಿದ್ಯಮಾನವಲ್ಲ. ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ರೈತರು, ಬಡವರ ಜೀವನ ಸುಧಾರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿರೋಧ ಪಕ್ಷಗಳು ಆ ಬಗ್ಗೆ ಮಾತನಾಡದೇ, ತೈಲ ಬೆಲೆ ಏರಿಕೆ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ADVERTISEMENT

23ರಂದು ಬಲಿದಾನ ದಿನ:
ಜೂನ್‌ 23 ಶ್ಯಾಮ ಪ್ರಕಾಶ್‌ ಮುಖರ್ಜಿಯವರ ಬಲಿದಾನ ದಿನವಾಗಿದ್ದು, ಅಂದು ರಾಜ್ಯದಲ್ಲಿ 300 ಕಡೆಗಳಲ್ಲಿ ಚಿಂತನ ಮಂಥನ ಕಾರ್ಯಕ್ರಮವನ್ನು ವೆಬೆಕ್ಸ್‌ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ರವಿಕುಮಾರ್‌ ತಿಳಿಸಿದರು.

ಅಲ್ಲದೆ, ಜುಲೈ 6 ರವರೆಗೆ 58 ಸಾವಿರ ಬೂತ್‌ಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ಮತ್ತು ಪ್ರಧಾನಿ ಮೋದಿಯವರ ಮನ್‌ ಕಿ ಬಾತ್‌ ರೇಡಿಯೋ ಭಾಷಣವನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಇದೇ 25 ರಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. 26 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಅವರು ವರ್ಚುವಲ್‌ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ರವಿಕುಮಾರ್‌ ಹೇಳಿದರು.

ತುರ್ತುಪರಿಸ್ಥಿತಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಗಣೇಶ್‌ ಕಾರ್ಣಿಕ್‌, ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ಸುದ್ದಿವಾಹಿನಿಗಳಿಗೆ ಅವಕಾಶ ಕೊಟ್ಟಿಲ್ಲ. ಆದರೆ, ಒಳಗಿನ ಕಲಾಪದ ನೇರ ಪ್ರಸಾರದ ಕೇಬಲ್‌ ಸಂಪರ್ಕ ನೀಡಲಾಗಿದೆ. ಲೋಕಸಭೆ ಮತ್ತು ರಾಜ್ಯ ಸಭೆಯಲ್ಲೂ ಹಿಂದಿನಿಂದ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.