ADVERTISEMENT

ಪ್ರಚಾರಕ್ಕೆ ತೇಜಸ್ವಿನಿ: ನಿರ್ಧಾರ ನಿಗೂಢ

ಬೆಂಗಳೂರು ದಕ್ಷಿಣ ಕ್ಷೇತ್ರ: ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಭೇಟಿಯಾಗಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:57 IST
Last Updated 30 ಮಾರ್ಚ್ 2019, 19:57 IST
ತೇಜಸ್ವಿನಿ
ತೇಜಸ್ವಿನಿ   

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕದೇ ಇರುವ ಕಾರಣಕ್ಕೆ ಬೇಸರಗೊಂಡಿರುವ ತೇಜಸ್ವಿನಿ ಅನಂತ್‌ ಕುಮಾರ್‌ ಅವರು, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರಕ್ಕೆ ತೆರಳುವ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಶುಕ್ರವಾರ ಬೆಂಗಳೂರಿಗೆ ಬಂದಿದ್ದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರನ್ನು ಭೇಟಿಯಾಗಿದ್ದ ತೇಜಸ್ವಿನಿ ಕೆಲ ಹೊತ್ತು ಚರ್ಚಿಸಿದರು. ಅವರಿಬ್ಬರ ಮಧ್ಯೆ ಏನು ಚರ್ಚೆ ನಡೆಯಿತು ಎಂಬುದು ಬಹಿರಂಗಗೊಂಡಿಲ್ಲ.

ಆರ್‌ಎಸ್‌ಎಸ್‌ನ ರಾಜ್ಯದ ಘಟಕದ ಕೆಲವು ನಾಯಕರು ಹಾಗೂ ಅಖಿಲ ಭಾರತ ಬ್ರಾಹ್ಮಣ ಮಹಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ತೇಜಸ್ವಿನಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ADVERTISEMENT

ಮನೆ ಬಿಟ್ಟು ಹೊರ ಬಂದಿಲ್ಲ: ‘ಪ್ರಜಾವಾಣಿ’ ಜತೆ ಶನಿವಾರ ಸಂಜೆ ಮಾತನಾಡಿದ ತೇಜಸ್ವಿನಿ ಅವರು, ಪ್ರಚಾರಕ್ಕೆ ಹೋಗುವ ಬಗ್ಗೆ ತಮ್ಮ ಗುಟ್ಟನ್ನು ಬಿಟ್ಟುಕೊಡಲಿಲ್ಲ.

‘ದಕ್ಷಿಣ ಕ್ಷೇತ್ರದ ಟಿಕೆಟ್‌ ನೀಡಿಕೆ ಬಗ್ಗೆ ನಿಮ್ಮ ಪಕ್ಷದಲ್ಲಿ ಗೊಂದಲ ಇದೆಯೇ’ ಎಂಬ ಪ್ರಶ್ನೆಗೆ, ‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯ ಹೆಸರು ಪ್ರಕಟವಾದ ನಂತರ ನಾನು ಮನೆ ಬಿಟ್ಟು ಹೊರಗೆ ಕಾಲಿಟ್ಟಿಲ್ಲ. ಹೀಗಾಗಿ, ಏನೆಲ್ಲಾ ವಿದ್ಯಮಾನಗಳು ಮತ್ತು ಗೊಂದಲಗಳು ನಡೆದಿವೆಯೋ ಎಂಬುದನ್ನು ನೀವೇ ತಿಳಿಸಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ಪಕ್ಷದ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಗೊಂದಲ ಇದೆಯೇ ಇಲ್ಲವೋ ಎಂಬುದನ್ನು ನನಗೆ ಗೊತ್ತಿಲ್ಲ. ನಾನೇನಿದ್ದರೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಲುವಾಗಿ ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ’ ಎಂದರು.

‘ಯಾರನ್ನು ಉದ್ದೇಶಿಸಿ ನೀವು ಶುಕ್ರವಾರ ಟ್ವೀಟ್ ಮಾಡಿದ್ದು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಮಾಡಿದ್ದ ಟ್ವೀಟ್‌ (ಪ್ರತಿಯೊಬ್ಬ ವ್ಯಕ್ತಿಯ ಹುರುಪು ಮತ್ತು ಸೇವೆ ಒಗ್ಗೂಡಿದರೆ ಮಾತ್ರ ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯಬಹುದೇ ಹೊರತು, ಸ್ವಾರ್ಥದಿಂದ ಅಲ್ಲ) ಯಾವ ನಾಯಕರ ವಿರುದ್ಧವೂ ಆಗಿರಲಿಲ್ಲ. ಸಾಮಾನ್ಯವಾಗಿ ಟ್ವೀಟ್‌ಗಳು ಎಲ್ಲರನ್ನು ಉದ್ದೇಶಿಸಿಯೇ ಇರುತ್ತವೆ. ಟ್ವಿಟರ್‌ನಲ್ಲಿ ನನ್ನನ್ನು ಫಾಲೋ ಮಾಡುವವರಲ್ಲಿ ಉಂಟಾಗಿರುವ ಗೊಂದಲ ದೂರ ಮಾಡುವುದು ಮತ್ತು ದೇಶಕ್ಕಾಗಿ ಕೆಲಸ ಮಾಡುವಂತೆ ಅವರನ್ನು ಪ್ರೇರೇಪಿಸುವುದೇ ನನ್ನ ಉದ್ದೇಶವಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಟಿಕೆಟ್‌ ನೀಡುವ ವಿಷಯ ವರಿಷ್ಠರ ವಿವೇಚನೆಗೆ ಬಿಟ್ಟಿದ್ದು. ಅದರ ಬಗ್ಗೆ ಸ್ಪಷ್ಟನೆ ಕೇಳುವ ಅಗತ್ಯ ನನಗಿಲ್ಲ. ಕೆಲವರಿಗೆ ಈ ಬಗ್ಗೆ ಪ್ರಶ್ನೆಗಳಿವೆ. ಕೆಲವು ದಿನಗಳಲ್ಲಿ ಅವರಿಗೆ ಉತ್ತರ ಸಿಗಲಿದೆ’ ಎಂದೂ ಹೇಳಿದರು.

‘ನಾನೆಂದಿಗೂ ಬಿಜೆಪಿ ಸದಸ್ಯೆ’

‘ನಾನು ಎಂದಿಗೂ ಬಿಜೆಪಿ ಸದಸ್ಯೆ, ಈ ಹಿಂದೆ ಹಲವು ಚುನಾವಣೆಗಳಲ್ಲಿ ಅನಂತಕುಮಾರ್ ಪರವಾಗಿ ಪ್ರಚಾರ ಮಾಡಿದ್ದೇನೆ. ವಿ.ಸೋಮಣ್ಣ, ಜಯನಗರ ಶಾಸಕರಾಗಿದ್ದ ವಿಜಯಕುಮಾರ್ ನಿಧನದ ನಂತರ ಅವರ ಸಹೋದರ ಪ್ರಹ್ಲಾದ್‌ ಬಾಬು ಅವರ ಪರವಾಗಿಯೂ ಪ್ರಚಾರ ಮಾಡಿದ್ದೇನೆ’ ಎಂದೂ ತೇಜಸ್ವಿನಿ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.