ADVERTISEMENT

‘ಕೈ’ ಹಿಡಿದ ಮಾಜಿ ಶಾಸಕ ಬಿಜೆಪಿಯ ವಿ.ಎಸ್ ಪಾಟೀಲ, ಮುಖಂಡ ಶ್ರೀನಿವಾಸ್ ಭಟ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 10:34 IST
Last Updated 15 ಡಿಸೆಂಬರ್ 2022, 10:34 IST
   

ಬೆಂಗಳೂರು: ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ವಿ.ಎಸ್. ಪಾಟೀಲ ಮತ್ತು ಮುಖಂಡ ಶ್ರೀನಿವಾಸ್ ಭಟ್ ದಾತ್ರಿ ಗುರುವಾರ ಕಾಂಗ್ರೆಸ್ ಸೇರ್ಪಡೆಯಾದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು ಪಕ್ಷದ ಧ್ವಜ ನೀಡಿ ವಿ.ಎಸ್. ಪಾಟೀಲ ಮತ್ತು ಶ್ರೀನಿವಾಸ್ ಭಟ್ ದಾತ್ರಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

‘ವಿ.ಎಸ್. ಪಾಟೀಲ ಅವರು ನಮ್ಮ ಜತೆ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಪಾಟೀಲ ಅವರಿಗೆ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು. ಪಾಟೀಲರ ತಂದೆ ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರು ಕೂಡ ಪಕ್ಷದ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರು. ಈ ಮಧ್ಯೆ ಅವರು ಬಿಜೆಪಿ ಸೇರಿ ಸ್ಪರ್ಧಿಸಿದ್ದರು. ಆಪರೇಷನ್ ಕಮಲದಲ್ಲಿ ನಮ್ಮ ಶಾಸಕರು ಬಿಜೆಪಿಗೆ ಹೋದ ನಂತರ ಆ ಕ್ಷೇತ್ರಗಳ ಬಹುತೇಕ ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ‘ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ADVERTISEMENT

‘ನಮ್ಮ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಅವರು ಪಕ್ಷಕ್ಕೆ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್, ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಎಲ್ಲ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ‘ ಎಂದೂ ಹೇಳಿದರು.

‘ಬಿಜೆಪಿಯ ಸಕ್ರಿಯ ನಾಯಕರಾದ ಜಿಲ್ಲಾ ಖಜಾಂಚಿಗಳಾದ ಉದ್ಯಮಿ ಶ್ರೀನಿವಾಸ್ ಭಟ್ ದಾತ್ರಿ ಕೂಡ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಅವರು ಉತ್ತಮ ಸಂಘಟಕ. ಯಲ್ಲಾಪುರ ಕ್ಷೇತ್ರದ ಯುವಕರಲ್ಲಿ ಚಿರಪರಿಚಿತರಾಗಿದ್ದಾರೆ. ಅವರು ಕೂಡ ದೇಶಪಾಂಡೆ ಹಾಗೂ ನನ್ನನ್ನು ಭೇಟಿ ಮಾಡಿ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಅವರು ಸಲ್ಲಿಸಿದ ಅರ್ಜಿ ಮೇಲೆ ನಾವೆಲ್ಲರೂ ಚರ್ಚೆ ಮಾಡಿ ಪಕ್ಷಕ್ಕೆ ಬರ ಮಾಡಿಕೊಂಡಿದ್ದೇವೆ‘ ಎಂದರು.

‘ಪಕ್ಷದ ಸೇರಲು ಹಲವು ಅರ್ಜಿ ಹಾಕಿದ್ದಾರೆ. ಇನ್ನಿಬ್ಬರು ನಾಯಕರನ್ನು ಇಂದು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗಿತ್ತು.ಅವರ ಆರೋಗ್ಯ ಸರಿ ಇಲ್ಲದ ಕಾರಣ ಸೇರ್ಪಡೆ ಕಾರ್ಯಕ್ರಮ ಮುಂದೂಡಿದ್ದೇವೆ. ಕೆಲವರು ಅಧಿವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಪ್ರತಿವಾರ ಸಭೆ ಮಾಡಿ ಒಬ್ಬೊಬ್ಬರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.