
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ಧ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನ.27, 28ರಂದು ಬಿಜೆಪಿ ರೈತ ಮೋರ್ಚಾ ಹೋರಾಟ ಹಮ್ಮಿಕೊಂಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಒಬ್ಬ ಸಚಿವರೂ ಸಮಸ್ಯೆ ಆಲಿಸುತ್ತಿಲ್ಲ. ಅತಿವೃಷ್ಟಿಯಿಂದ ಆದ ಬೆಳೆನಷ್ಟಕ್ಕೆ ಪರಿಹಾರ ನೀಡಿಲ್ಲ. ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ತ್ವರಿತವಾಗಿ ದುರಸ್ತಿ ಮಾಡದ ಕಾರಣ ನೀರು ವ್ಯರ್ಥವಾಗಿದೆ. ಅಚ್ಚುಕಟ್ಟು ಪ್ರದೇಶದ ಎರಡು ಬೆಳೆಗಳಿಗೆ ನೀರು ಇಲ್ಲದಂತೆ ಮಾಡಿದ್ದಾರೆ’ ಎಂದು ದೂರಿದರು.
ಕೇಂದ್ರ ಸರ್ಕಾರ ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಕೇಂದ್ರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ ಖರೀದಿ ಆರಂಭಿಸಿಲ್ಲ. ಹಾಲಿನ ಪ್ರೋತ್ಸಾಹಧನ ಬಾಕಿ ಬಿಡುಗಡೆ ಮಾಡಿಲ್ಲ. ರೈತರ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆಯ ನಂತರ ಡಿ.1 ಮತ್ತು 2ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.