ADVERTISEMENT

ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 10:22 IST
Last Updated 29 ಜನವರಿ 2023, 10:22 IST
   

ಬೆಳಗಾವಿ: ‘ಸಾವಯವ ಕೃಷಿ ಬಗ್ಗೆ ದೇಶದಾದ್ಯಂತ ಜಾಗೃತಿ ಮೂಡಿಸಿ ಆರೋಗ್ಯಕರ ಸಮಾಜ ನಿರ್ಮಿಸುವ ಉದ್ದೇಶವನ್ನು ಈ ಬಾರಿ ರಾಷ್ಟ್ರೀಯ ಕಾರ್ಯಕಾರಣಿ ಹೊಂದಿದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜಕುಮಾರ್‌ ಚಾಹರ್‌ ಹೇಳಿದರು.

ನಗರದಲ್ಲಿ ಬಿಜೆಪಿ ರೈತ ಮೋರ್ಚಾ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಕಾರಣಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೀಟನಾಶಕ, ರಾಸಾಯನಿಕಗಳ ವಿಪರೀತ ಬಳಕೆಯಿಂದಾಗಿ ಆಹಾರ ವಿಷವಾಗುತ್ತಿದೆ. ಇದನ್ನು ತಪ್ಪಿಸಿ ಸ್ವಾಸ್ಥ್ಯ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಇರಿಸಿದ್ದು, ಸಾವಯವ ಕೃಷಿಗೆ ಪ್ರಾಧಾನ್ಯತೆ ಕೊಡುವಂತೆ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ’ ಎಂದರು.

‘2014ಕ್ಕೂ ಮುನ್ನ, ಕೇಂದ್ರದಲ್ಲಿ ಕೃಷಿ ಬಜೆಟ್‌ ಗಾತ್ರ ₹39 ಸಾವಿರ ಕೋಟಿ ಇತ್ತು. ಬಿಜೆಪಿ ಅದನ್ನು ₹1.35 ಲಕ್ಷ ಕೋಟಿಗೆ ಹೆಚ್ಚಿಸಿದೆ. ಈ ಹಿಂದೆ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ರೈತರಿಗಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದ್ದರು. ಅದಕ್ಕೆ ಪಶುಸಂಗೋಪನೆ, ಮೀನುಗಾರಿಕೆ ಕ್ಷೇತ್ರಗಳನ್ನು ಜೋಡಿಸಿದ ಶ್ರೇಯ ಮೋದಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ADVERTISEMENT

‘ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ ವಾರ್ಷಿಕ ₹6 ಸಾವಿರ ಸಹಾಯಧನ ನೀಡಲಾಗುತ್ತಿದೆ. ಇದರಿಂದ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಅವರಿಗೆ ಅನುಕೂಲವಾಗುತ್ತಿದೆ. ಬೇರೆ ಬೇರೆ ಪಕ್ಷಗಳ ಮುಖಂಡರು ರೈತರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವದಲ್ಲಿ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವುದೇ ನಮ್ಮ ಸರ್ಕಾರ’ ಎಂದು ಹೇಳಿದರು.

ಶಾಸಕ ಬಿ.ಎಸ್‌.ಯಡಿಯೂರಪ್ಪ, ‘ನಾನು 2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರತ್ಯೇಕವಾಗಿ ಕೃಷಿ ಬಜೆಟ್‌ ಮಡಿಸಿದ್ದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯದ ಪಾಲು ಸೇರಿಸಿ, ರೈತರಿಗೆ ವಾರ್ಷಿಕ ₹10 ಸಾವಿರ ಸಹಾಯಧನ ಸಿಗುವಂತೆ ಮಾಡಿದ್ದೇನೆ. ಗಂಗಾಕಲ್ಯಾಣ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ’ ಎಂದರು.

‘ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ರೈತಗೀತೆ ಕಡ್ಡಾಯಗೊಳಿಸಿದ ಕೀರ್ತಿಯೂ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಇದರಿಂದ ರೈತರ ಆತ್ಮಾಭಿಮಾನ ಹೆಚ್ಚುವಂತಾಗಿದೆ’ ಎಂದರು.

ಪಕ್ಷದ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣಾ ಕಡಾಡಿ, ‘ಕೊಂಕಣ, ಕನ್ನಡ, ಮರಾಠಿ ಮೂರು ಸಂಸ್ಕೃತಿಗಳು ಇಲ್ಲಿ ಮೇಳೈಸಿವೆ. ಹೀಗಾಗಿ ಅಟಲ್‌ ಬಿಹಾರಿ ವಾಜಪೇಯಿ ಬೆಳಗಾವಿ ಮಹಾನಗರವನ್ನು ‘ಕೋಕಮ್‌‘ ಎಂದು ಬಣ್ಣಿಸಿದ್ದರು. ಇದು ವೀರ–ಶೂರರ ನಾಡು. ಕೃಷಿಪ್ರಧಾನವಾದ ಪ್ರದೇಶ. ಈ ಹಿನ್ನೆಲೆಯಲ್ಲಿ ಇಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ ಕಾರ್ಯಕಾರಣಿ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ರೈತರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿದ ಕಾರ್ಯಕ್ರಮಗಳ ಬಗ್ಗೆ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗುವುದು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲ ನಿರ್ಣಯಗಳನ್ನು ಕೈಗೊಂಡು, ಅನುಷ್ಠಾನಕ್ಕೆ ಕೇಂದ್ರಕ್ಕೆ ಸಲಹೆ ನೀಡಲಾಗುವುದು’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಸಂಸದೆ ಮಂಗಲಾ ಅಂಗಡಿ ಇತರರಿದ್ದರು.

ಇದಕ್ಕೂ ಮುನ್ನ, ಕೋಟೆ ಕೆರೆಯಿಂದ ಮಯೂರ್‌ ಪ್ರೆಸಿಡೆನ್ಸಿ ಕ್ಲಬ್‌ವರೆಗೆ ಶೋಭಾಯಾತ್ರೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.