ADVERTISEMENT

ಮಾಧ್ಯಮ ನಿರ್ಬಂಧಕ್ಕೆ ಮುಂದಾದ ಸರ್ಕಾರ

150 ಪತ್ರಕರ್ತರಿಗೆ ಮಾತ್ರ ಪ್ರವೇಶ ಅನುಮತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 20:18 IST
Last Updated 7 ಸೆಪ್ಟೆಂಬರ್ 2019, 20:18 IST
   

ಬೆಂಗಳೂರು: ‘ಆಡಳಿತ ಶಕ್ತಿ’ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಇನ್ನು ಮುಂದೆ 150 ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಮೂಲಕ, ಮಾಧ್ಯಮ ನಿರ್ಬಂಧಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.

ವಾರ್ತಾ ಮತ್ತು ಪ್ರಚಾರ ಇಲಾಖೆ ಶಿಫಾರಸು ಮಾಡಿದವರಿಗೆ ಗರಿಷ್ಠ ಒಂದು ವರ್ಷದ ಅವಧಿಗೆ ಪ್ರವೇಶ ‍ಪತ್ರ ನೀಡಲು ತೀರ್ಮಾನಿಸಲಾಗಿದೆ. ಈ ಪತ್ರಕರ್ತರಿಗೆ ಯೆಲ್ಲೊ ಕಾರ್ಡ್‌ ವಿತರಿಸಲಾಗುವುದು. ಭದ್ರತೆ ದೃಷ್ಟಿಯಿಂದ ಕೈಗೊಳ್ಳಲಾಗುವ ಸುಧಾರಣಾ ಕ್ರಮದ ಭಾಗವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸೆ. 4ರಂದು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ವಿಧಾನಸೌಧದ ವಿವಿಧ ಕಚೇರಿಗಳಿಗೆ ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ತರುವವರಿಗೆ, ಅಂಥವರ ಬಗ್ಗೆ ಆಯಾ ಸಚಿವರು ಅಥವಾ ಅಧಿಕಾರಿಗಳ ಆಪ್ತ ಕಾರ್ಯದರ್ಶಿಗಳು ಸಂಪೂರ್ಣ ಮಾಹಿತಿ ನೀಡಿದ ಬಳಿಕ ಆರು ತಿಂಗಳ ಅವಧಿಗೆ ಹಳದಿ ಬಣ್ಣದ ತಾತ್ಕಾಲಿಕ ಗುರುತಿನ ಕಾರ್ಡ್‌ ನೀಡುವ ಬಗ್ಗೆಯೂ ಮಾರ್ಗಸೂಚಿಯಲ್ಲಿದೆ. ಗುರುತಿನ ಚೀಟಿ ನೀಡಬೇಕಾದ ಅಗತ್ಯ ಬಗ್ಗೆ ವಿವಿಧ ಇಲಾಖೆಗಳು, ನಿಗಮ– ಮಂಡಳಿಗಳಿಂದ ಕೋರಿಕೆ ಬಂದ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದೆ ಎಂದೂ ಸ್ಪಷ್ಟಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.