ADVERTISEMENT

ಬಿಜೆಪಿಯಿಂದ ಹಿಂದೂ–ಮುಸ್ಲಿಂ ಧ್ರುವೀಕರಣ: ಬಿ.ಕೆ.ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 23:47 IST
Last Updated 21 ಸೆಪ್ಟೆಂಬರ್ 2025, 23:47 IST
ಬಿ.ಕೆ.ಚಂದ್ರಶೇಖರ್
ಬಿ.ಕೆ.ಚಂದ್ರಶೇಖರ್   

ಬೆಂಗಳೂರು: ‘ಬಿಜೆಪಿಯು ತನ್ನ ರಾಜಕೀಯ ತಂತ್ರವಾಗಿ ಹಿಂದೂ–ಮುಸ್ಲಿಂ ಧ್ರುವೀಕರಣವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಯಾವ ವಿಷಯವಾದರೂ, ಯಾವ ಸಂದರ್ಭವಾದರೂ ಜನರಲ್ಲಿ ಭಯ ಹುಟ್ಟಿಸಿ ‘ಶತ್ರು’ವಿನ ಕಲ್ಪನೆಯನ್ನು ಮೂಡಿಸುವ ಅವಕಾಶ ಸಿಕ್ಕರೆ ಬಿಜೆಪಿ ಬಿಡುವುದೇ ಇಲ್ಲ’ ಎಂದು ಕಾಂಗ್ರೆಸ್‌ನ ನಾಯಕ ಬಿ.ಕೆ.ಚಂದ್ರಶೇಖರ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಬಿಜೆಪಿಯ ನಿಜವಾದ ರಾಜಕೀಯ ತಂತ್ರ ಇದು. ಗೋಧ್ರಾ ಹತ್ಯಾಕಾಂಡವಾಗಲಿ, ಎಲ್.ಕೆ.ಅಡ್ವಾಣಿಯವರ ರಾಮ ರಥಯಾತ್ರೆಯಾಗಲಿ, ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಲಿ... ಚುನಾವಣೆ ಗೆಲ್ಲಲು ಇದುವೇ ಬಿಜೆಪಿಯ ಕಾರ್ಯಸೂಚಿ’ ಎಂದಿದ್ದಾರೆ.

‘ಕರ್ನಾಟಕದಲ್ಲಿಯೂ ಬಿಜೆಪಿ ನಾಯಕರು ಇದೇ ಕಾರ್ಯಸೂಚಿಯನ್ನು ಭಿನ್ನ ಶೈಲಿಯಲ್ಲಿ ಮತ್ತು ಭಿನ್ನ ಸ್ವರದಲ್ಲಿ ಪಠಿಸುತ್ತಿದ್ದಾರೆ. ಈ ಬಾರಿ ಕನ್ನಡ ಲೇಖಕಿ ಬಾನು ಮುಶ್ತಾಕ್ ಅವರೇ ಬಿಜೆಪಿಯ ರಾಜಕೀಯ ಮತ್ತು ಭಾವನಾತ್ಮಕ ದಾಳಿಯ ಗುರಿಯಾಗಿದ್ದಾರೆ. ಮುಸ್ಲಿಂ ಕವಿ ನಿಸಾರ್ ಅಹಮದ್ ಅವರೂ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದರು ಎಂಬ ಸತ್ಯವನ್ನು ರಾಜ್ಯದ ಬಿಜೆಪಿ ನಾಯಕರು ಸಂಪೂರ್ಣವಾಗಿ ಮರೆತಿರುವುದು ಉದ್ದೇಶಪೂ‍ವ೯ಕವಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ವಿವೇಕಾನಂದರು ಹಿಂದೂ–ಮುಸ್ಲಿಂ ಏಕತೆಯೇ ಭಾರತದ ನಿಜವಾದ ಶಕ್ತಿಯ ಮೂಲ ಎಂದು ಘೋಷಿಸಿದ್ದರು. ಈ ಎರಡು ಸಮುದಾಯಗಳು ಒಟ್ಟಾಗಿ ಬಂದಾಗ ಮಾತ್ರ ಭಾರತವು ಬಲಿಷ್ಠ ಮತ್ತು ಸ್ವಾವಲಂಬಿ ರಾಷ್ಟ್ರವಾಗುತ್ತದೆ ಎಂದು ಅವರು ದೃಢವಾಗಿ ನಂಬಿದ್ದರು. ವಿವೇಕಾನಂದರ ಈ ಮಾತುಗಳನ್ನು ತಳ್ಳಿಹಾಕಲು ಬಿಜೆಪಿಗೆ ಸಾಧ್ಯವೇ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.