ADVERTISEMENT

ಸಿಎಂ ಬಿಎಸ್‌ವೈ – ಪಕ್ಷದ ಅಧ್ಯಕ್ಷ ಕಟೀಲ್‌ ನಡುವೆ ಮುಂದುವರೆದ ಮುಸುಕಿನ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 11:27 IST
Last Updated 26 ಸೆಪ್ಟೆಂಬರ್ 2019, 11:27 IST
   

ಬೆಂಗಳೂರು:ಬಿ.ಎಸ್‌ಯಡಿಯೂರಪ್ಪ ಅವರುಪಕ್ಷದಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಪಕ್ಷದ ಸ್ಥಾನ ಕಳೆದುಕೊಂಡಿದ್ದವರಿಗೆ ಈಗಿನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರುಮತ್ತೆ ಜವಾಬ್ದಾರಿ ನೀಡಿದ್ದಾರೆ. ಈ ಮೂಲಕಬಿಜೆಪಿಯಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರ ನಡುವಿನ ಅಧಿಕಾರಸಮರ ಮತ್ತೊಂದು ಮಜಲು ತಲುಪಿದೆ.

ಮಾಜಿ ಶಾಸಕ ನಿರ್ಮಲ್‌ ಕುಮಾರ್‌ ಸುರಾನ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ಎಂ.ಬಿಭಾನುಪ್ರಕಾಶ್‌ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನಳೀನ್‌ ಕುಮಾರ್‌ ಗುರುವಾರ ನೇಮಿಸಿದರು.ಆದರೆ, ಈ ಇಬ್ಬರೂ ಯಡಿಯೂರಪ್ಪ ಅವರು ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಅವರ ವಿರುದ್ಧ ದನಿ ಎತ್ತಿದ್ದವರು.

ADVERTISEMENT

ಪಕ್ಷದ ಕೆಲ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರನ್ನು ಬದಲಿಸುವ ವಿಚಾರದಲ್ಲಿ ಆಗುತ್ತಿದ್ದ ವಿಳಂಬದಿಂದಾಗಿ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ನಿರ್ಮಲ್‌ ಕುಮಾರ್‌ ಸುರಾನ ಎರಡು ವರ್ಷಗಳ ಹಿಂದೆ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಪತ್ರಿಕಾಗೋಷ್ಠಿ ಕರೆದು ಅಸಮಾಧಾನ ಹೊರ ಹಾಕಿದ್ದರು. ಅಲ್ಲದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ದೆಹಲಿ ನಾಯಕರಿಗೆ ವಿಚಾರ ಮುಟ್ಟಿಸುವುದಾಗಿ ಎಚ್ಚರಿಸಿದ್ದರು.

ಬಿ.ಎಸ್‌ ಯಡಿಯೂರಪ್ಪ ಅವರು ಕೆಜೆಪಿಯಿಂದ ಬಿಜೆಪಿಗೆ ಬಂದ ನಂತರ ಎಲ್ಲರನ್ನೂ ವಿಶ್ವಾಸದಿಂದ ಕಾಣುತ್ತಿಲ್ಲ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್‌ ಅವರು ಆರೋಪಿಸಿದ್ದರು. 2017ರಲ್ಲಿ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದಲೂ ತೆಗೆದು ಹಾಕಲಾಗಿತ್ತು. ನಂತರ ಅವರನ್ನುಮರಳಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತಾದರೂ, ಸ್ಥಾನವನ್ನು ಅವರು ನಿರಾಕರಿಸಿದ್ದರು.

ಈ ಮಧ್ಯೆ ಇಬ್ಬರೂ ಮುಖಂಡರನ್ನು ಸಮಾಧಾನಪಡಿಸುವ ಪ್ರಯತ್ನಗಳು ನಡೆದಿದ್ದವು. ಆದರೆ, ಯಾವುದೂ ಸಫಲವಾಗಿರಲಿಲ್ಲ. ಇದೀಗ ನಳೀನ್‌ ಕುಮಾರ್‌ ಕಟೀಲ್‌ ಅವರು ಇಬ್ಬರನ್ನೂ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ.

ಬಿಬಿಎಂಪಿ ಮೇಯರ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿಎಸ್‌ ಯಡಿಯೂರಪ್ಪ ಅವರು ಹಿರಿಯ ಶಾಸಕ ರಘು ಅವರ ನೇತೃತ್ವದಲ್ಲಿ ಆಂತರಿಕ ಸಮಿತಿ ರಚನೆ ಮಾಡಿದ್ದರು. ಇದರ ಬೆನ್ನಿಗೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಪಕ್ಷದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅಂಥ ಯಾವುದೇ ಸಮಿತಿ ರಚನೆ ಮಾಡಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.