ADVERTISEMENT

ಆರ್ಥಿಕ ಹಿಂಜರಿತ ಮರೆಮಾಚುತ್ತಿರುವ ಬಿಜೆಪಿ: ಕಾಂಗ್ರೆಸ್‌

ಪರಿಷತ್‌ನಲ್ಲಿ ಸರ್ಕಾರದ ವಿರುದ್ಧ ಪಿ.ಆರ್‌. ರಮೇಶ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 21:58 IST
Last Updated 17 ಮಾರ್ಚ್ 2022, 21:58 IST
ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಮಾತನಾಡಿದರು  –ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಮಾತನಾಡಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆರ್ಥಿಕ ಹಿಂಜರಿತ ಇದ್ದರೂ ಭಾವನಾತ್ಮಕ ವಿಷಯಗಳಿಂದ ಮರೆಮಾಚುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ’ ಎಂದು ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಟೀಕಿಸಿದರು.

ಬಜೆಟ್‌ ಕುರಿತ ಚರ್ಚೆಯಲ್ಲಿ ಅವರು, ‘ಬಿಜೆಟ್‌ ಸಂಪೂರ್ಣವಾಗಿ ಅಶಿಸ್ತಿನಿಂದ ಕೂಡಿದೆ. ಹಣಕಾಸಿನ ವ್ಯವಸ್ಥೆ ನಿರ್ವಹಿಸಲಾಗದ ಪರಿಸ್ಥಿತಿಯಿದೆ. ಕೇಂದ್ರದಿಂದಲೂ ರಾಜ್ಯಕ್ಕೆ ದೊರೆಯಬೇಕಾದ ಪಾಲು ದೊರೆಯುತ್ತಿಲ್ಲ’ ಎಂದು ದೂರಿದರು.

‘ಗೋವುಗಳ ರಕ್ಷಣೆ ಹೆಸರಿನಲ್ಲಿ ಮತ ಪಡೆಯುತ್ತೀರಿ. ಆದರೆ, ಬೆಂಗಳೂರಿನಲ್ಲೇ ಉತ್ತಮ ಗುಣಮಟ್ಟದ ಗೋಮಾಂಸ ಎಲ್ಲೆಡೆ ಸಿಗುತ್ತಿದೆ. ಹಾಗಾದರೆ, ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಅಧಿಕಾರಿಗಳ ಮನೆಯ ಪೈಪ್‌, ತೊಟ್ಟಿಗಳಲ್ಲಿ ದುಡ್ಡು ಬರುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆಗೆ ಯಾರು ಕಾರಣ? ನಿರುದ್ಯೋಗವೂ ಹೆಚ್ಚಾಗಿದೆ. ಯುವಕರಿಗೆ ಉದ್ಯೋಗಾವಕಾಶ ಇಲ್ಲದಂತಾಗಿದೆ. ಇಡೀ ಬಜೆಟ್‌ ಕನ್ನಡಿಯಲ್ಲಿರುವ ಗಂಟು’ ಎಂದು ಟೀಕಿಸಿದರು.

‘ಒಬಿಸಿಗೆ ಮೀಸಲಾತಿ ಬಳಿಕವೇ ಚುನಾವಣೆ’
‘ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ಬಳಿಕವೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು’ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

‘ಸರ್ಕಾರ ಹಿಂದುಳಿದ ವರ್ಗಗಳ ಪರವಾಗಿಯೇ ಇದೆ. ಮೀಸಲಾತಿ ಕಲ್ಪಿಸುವ ಬಗ್ಗೆ ಈಗಾಗಲೇ ಎರಡು–ಮೂರು ಬಾರಿ ಸಭೆಗಳನ್ನು ಮಾಡಲಾಗಿದೆ’ ಎಂದು ವಿಧಾನಪರಿಷತ್‌ನಲ್ಲಿ ತಿಳಿಸಿದರು.

ಸದನದಲ್ಲಿ ಕೇಳಿದ್ದು...
ಜಿಎಸ್‌ಟಿ ನಮ್ಮ ಕೂಸು. ಈ ಬಗ್ಗೆ ಹೆಮ್ಮೆ ಇದೆ. ಆದರೆ, ಇದನ್ನು ಜಾರಿಗೊಳಿಸಿದ ರೀತಿ ವಿನಾಶಕಾರಿಯಾಗಿದೆ.
-ಬಿ.ಕೆ. ಹರಿಪ್ರಸಾದ್‌,ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ

*

ಕಲ್ಯಾಣ ಕರ್ನಾಟಕದಲ್ಲಿ 34 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.
-ಅರವಿಂದ ಕುಮಾರ ಅರಳಿ,ಕಾಂಗ್ರೆಸ್‌ ಸದಸ್ಯ

*

ಸ್ತ್ರೀಶಕ್ತಿ ಸಂಘಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಈ ಸಂಘಗಳು ತಯಾರಿಸಿದ ವಸ್ತುಗಳನ್ನೇ ಸರ್ಕಾರ ಖರೀದಿಸಬೇಕು.
-ಭಾರತಿ ಶೆಟ್ಟಿ,ಬಿಜೆಪಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.