ADVERTISEMENT

ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 9:05 IST
Last Updated 8 ಜನವರಿ 2026, 9:05 IST
<div class="paragraphs"><p>ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ಮುಖಂಡರು&nbsp;</p></div>

ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ಮುಖಂಡರು 

   

ಬೆಂಗಳೂರು: ‘ಕುಮಾರಸ್ವಾಮಿಯವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆಯಿದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜು ಮತ್ತು ಅವರ ಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಮುಂತಾದವರನ್ನು ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಮಾತನಾಡಿದರು.

ADVERTISEMENT

‘ಪಾಲಿಕೆ ಮಾಜಿ ಸದಸ್ಯರಾಗಿರುವ ಗೋವಿಂದರಾಜು, ಜೆಡಿಎಸ್ ಪಕ್ಷ ಸಂಘಟಿಸಿ ಅಭ್ಯರ್ಥಿಯೂ ಆಗಿದ್ದರು. ಬಿಜೆಪಿ– ಜೆಡಿಎಸ್ ಮೈತ್ರಿ ಒಪ್ಪಿಕೊಳ್ಳಲು ಸಾಧ್ಯವಾಗದೆ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ನಮ್ಮದು ಜಾತ್ಯತೀತ ಸಿದ್ಧಾಂತ. ಹೀಗಾಗಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳಲು ಈ ತೀರ್ಮಾನಕ್ಕೆ ಬಂದಿದ್ದಾರೆ’ ಎಂದರು.

‘ಬೆಂಗಳೂರು ನಗರದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅನೇಕರು ಉತ್ಸುಕರಾಗಿದ್ದಾರೆ. ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106, ಬೆಂಗಳೂರು ಪೂರ್ವದಲ್ಲಿ 78 ಸೇರಿ ಒಟ್ಟು 779 ಟಿಕೆಟ್ ಆಕಾಂಕ್ಷಿಗಳು ಸ್ಪರ್ಧಿಸಲು ಆಸಕ್ತಿ ತೋರಿಸಿ ಅರ್ಜಿ ಪಡೆದುಕೊಂಡಿದ್ದಾರೆ’ ಎಂದರು.

‘ಅರ್ಜಿ ತೆಗೆದುಕೊಂಡವರು ಇದೇ 10ರ ಒಳಗಾಗಿ ಅರ್ಜಿ ಕೊಟ್ಟರೆ ಪಕ್ಷದಿಂದ ತಂಡವನ್ನು ಕಳುಹಿಸಿ ವರದಿ ಪಡೆಯಬಹುದು. ಯಾರು ವಾರ್ಡ್‌ಗಳಲ್ಲಿ ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂದು ಪರಿಶೀಲಿಸಿ ಟಿಕೆಟ್‌ ನೀಡಬಹುದು’ ಎಂದು ಪಕ್ಷದ ನಾಯಕರಿಗೆ ಹೇಳಿದರು.

‘ಬೆಂಗಳೂರು ನಗರದಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಕೆಲಸವನ್ನು ಬಿಜೆಪಿ ನಾಯಕರೇ ಸ್ವಾಗತಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಖಾತಾ ಪರಿವರ್ತನೆ, ಆಸ್ತಿ ದಾಖಲೆಗಳನ್ನು ಸರಿಪಡಿಸುತ್ತಿರುವುದನ್ನು ನೋಡಿದರೆ, ನಮಗೆ ಭವಿಷ್ಯವಿಲ್ಲ ಎಂದು ಬಿಜೆಪಿ ನಾಯಕರೇ ನಮ್ಮ ಬಳಿ ಹೇಳಿಕೊಂಡಿದ್ದಾರೆ’ ಎಂದರು.

‘ಚಾಮರಾಜಪೇಟೆ ಬಹಳ ಇತಿಹಾಸವಿರುವ ಕ್ಷೇತ್ರ. ನಾವು ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲು ಬಯಸಿ ಹಲವರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಪಾಲಿಕೆ ಚುನಾವಣೆ ಒಳಗೆ ಅವರೆಲ್ಲರನ್ನೂ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದರು.

‘ರಾಜಕಾರಣದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ನಾವು ಗೆಲ್ಲುತ್ತೀವೊ, ಸೋಲುತ್ತೀವೊ. ಆದರೆ, ಪಾಲಿಕೆ ಚುನಾವಣೆ ಮಾಡುವ ಬಗ್ಗೆ ಸರ್ಕಾರ ಈಗಾಗಲೇ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿದೆ. ಜೊತೆಗೆ, ಈ ವರ್ಷವನ್ನು ಚುನಾವಣಾ ವರ್ಷ ಎಂದು ಪರಿಗಣಿಸಲಾಗಿದ್ದು, ಈ ವರ್ಷವೇ ಇತರೆ ಸ್ಥಳೀಯಸಂಸ್ಥೆಗಳ ಚುನಾವಣೆ ನಡೆಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ, ಕಾನೂನು ಅಡೆತಡೆ ನಿವಾರಣೆಗೆ ತೀರ್ಮಾನಿಸಿದ್ದಾರೆ’ ಎಂದರು.

ಕುಮಾರಸ್ವಾಮಿಯಿಂದ ಕಲಿಯುವ ಅಗತ್ಯ ನನಗಿಲ್ಲ– ಡಿಕೆಶಿ

‘ರಾಜಕೀಯದಲ್ಲಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅನುಭವ ನನಗಿದೆ. ನಾನು ಮುಖ್ಯಮಂತ್ರಿ ಆಗದೇ ಇರಬಹುದು, ಆದರೆ, ಆಡಳಿತ ವಿಚಾರದಲ್ಲಿ ಅವರಿಗಿಂತ ಅನುಭವ ಹೊಂದಿದ್ದೇನೆ. ಅವರಿಂದ ಕಲಿಯುವ ಅಗತ್ಯ ನನಗಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ‘ನಾನು ಬಹಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಡಳಿತ ಹೇಗೆ ಮಾಡಬೇಕು, ಯಾರ ಜೊತೆ ಸಭೆ ಮಾಡಬೇಕು, ಮಾಡಬಾರದು ಎಂಬುದು ನನಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.