ADVERTISEMENT

ಟ್ವೀಟ್‌ಗೆ ಸ್ಪಂದಿಸಿ ವಿದ್ಯುತ್‌ ಕೊಡಿಸಿದ್ದೇವೆ, ಇದಲ್ಲವೇ ಅಚ್ಚೇ ದಿನ್‌: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2022, 5:56 IST
Last Updated 19 ಮೇ 2022, 5:56 IST
ಇಂಧನ ಸಚಿವ ಸುನೀಲ್‌ ಕುಮಾರ್‌ ಅವರು ಟ್ವೀಟ್‌ ಮಾಡಿರುವ ಚಿತ್ರ
ಇಂಧನ ಸಚಿವ ಸುನೀಲ್‌ ಕುಮಾರ್‌ ಅವರು ಟ್ವೀಟ್‌ ಮಾಡಿರುವ ಚಿತ್ರ   

ಬೆಂಗಳೂರು: 'ಟ್ವೀಟ್‌ ಮೂಲಕ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಾಗ ಶೀಘ್ರ ಸ್ಪಂದಿಸಿ ವಿದ್ಯುತ್‌ ಕೊಡಿಸಿದ್ದೇವೆ. ಇದಲ್ಲವೇ ಅಚ್ಚೇ ದಿನ್‌!' ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಇಂಧನ ಸಚಿವರಾಗಿದ್ದಾಗ ವಿದ್ಯುತ್‌ ಸಮಸ್ಯೆ ಬಗ್ಗೆ ಕರೆ ಮಾಡಿ ಕೇಳಿಕೊಂಡ ವ್ಯಕ್ತಿಯನ್ನು ಬಂಧಿಸಿದ್ದ ಸುದ್ದಿಯನ್ನು ಉಲ್ಲೇಖಿಸಿ, 'ಅವರು, ವಿದ್ಯುತ್‌ ಸಮಸ್ಯೆ ಹೇಳಿಕೊಂಡವರ ಮನೆಗೆ ರಾತ್ರೋರಾತ್ರಿ ಹೆಂಚು ತೆಗೆದು ಒಳನುಗ್ಗಿ ಬಂಧಿಸಿದರು' ಎಂದು ಬಿಜೆಪಿ ಛೇಡಿಸಿದೆ.

ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ ಪ್ರಕಾರ, ವಿಶ್ವನಾಥ ನಂದರ್ಗಿ ಎಂಬುವವರು ವೃದ್ಧೆಯೊಬ್ಬರ ಮನೆಯ ವಿದ್ಯುತ್‌ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಬಿಜೆಪಿ ನಾಯಕ ಜಗ್ಗೇಶ್‌ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ. ಬಳಿಕ ಜಗ್ಗೇಶ್ ಅವರು ಇಂಧನ ಸಚಿವ ಸುನೀಲ್‌ ಕುಮಾರ್‌ ಅವರಿಗೆ ಟ್ಯಾಗ್‌ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸಹಾಯ ಮಾಡುವಂತೆ ಸೂಚಿಸಿದ್ದಾರೆ.

ADVERTISEMENT

ಕಲಬುರಗಿ ಜಿಲ್ಲೆಯ ಅಫಜಲಪುರದ ಕೋಗನೂರ ಗ್ರಾಮದ ವೃದ್ಧೆ ಯೋಗಮ್ಮ ಅವರ ಮನೆಯಲ್ಲಿ ವಿದ್ಯುತ್‌ ದೀಪ ಬೆಳಗಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುನೀಲ್‌ ಕುಮಾರ್‌ ಅವರು 'ಕೆಲಸ ಆಗಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.