ADVERTISEMENT

ರಾಜಕೀಯ ವಿಶ್ಲೇಷಣೆ | ವರಿಷ್ಠರ ಮಧ್ಯ ಪ್ರವೇಶ: ವಿಜಯೇಂದ್ರಗೆ ಮತ್ತೆ ಅವಕಾಶ?

ವೈ.ಗ.ಜಗದೀಶ್‌
Published 30 ಮಾರ್ಚ್ 2025, 0:30 IST
Last Updated 30 ಮಾರ್ಚ್ 2025, 0:30 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬಿಜೆಪಿಯೆಂಬ ಕೋಟೆಯ ಕಲ್ಲುಗಳು ಅದುರಿ, ಶಕ್ತಿ ಸ್ಥಳವೇ ಅಲ್ಲಾಡಲು ಆರಂಭಿಸಿದ ಮೇಲೆ ಆ ಪಕ್ಷದ ವರಿಷ್ಠರು, ಕುಸಿದ ಭದ್ರ ಕೋಟೆಯ ರಕ್ಷಣೆಗೆ ದುರ್ಬಲ ಖಡ್ಗ ಹಿಡಿದು ಅಖಾಡಕ್ಕೆ ಇಳಿದಿದ್ದಾರೆ. ಸುದೀರ್ಘ ಅವಧಿಯ ಮೌನದ ಬಳಿಕ ಮಧ್ಯ ಪ್ರವೇಶಿಸಿದ ವರಿಷ್ಠರು, ಐವರಿಗೆ ನೋಟಿಸ್ ನೀಡಿ, ಒಬ್ಬರನ್ನು ಉಚ್ಚಾಟನೆ ಮಾಡಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ‍ಸಂಘಟನಾ ಚಟುವಟಿಕೆಯನ್ನು ಮುಂದುವರಿಸುವ ‘ಉದಾರ’ ಅವಕಾಶವನ್ನೂ ಕಲ್ಪಿಸಿದ್ದಾರೆ.

‘ಲೋಕಸಭೆ ಚುನಾವಣೆ ಬಳಿಕ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಮರವೇ ಶುರುವಾಗಲಿದೆ; ಸರ್ಕಾರವೇ ಪತನವಾಗಲಿದೆ; ಚುನಾವಣೆಗೆ ಸಜ್ಜಾಗಿ’ ಎಂದು ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ, ರಾಜ್ಯದ ನಾಯಕರು ತುತ್ತೂರಿ ಊದುತ್ತಲೇ ಬಂದಿದ್ದರು. ಎದುರಾಳಿ ಪಕ್ಷದಲ್ಲಿ ಅಸ್ಥಿರತೆ ಬಯಸಿದ್ದ ನಾಯಕರು, ಅಲ್ಲಾಡತೊಡಗಿದ್ದ ತಮ್ಮ ಪಕ್ಷದ ಬುಡವನ್ನೇ ಭದ್ರಗೊಳಿಸಲು ಆಗಲಿಲ್ಲ ಎಂಬ ಚರ್ಚೆ ಪಕ್ಷದ ವಲಯದಲ್ಲೇ ನಡೆಯುತ್ತಿದೆ. ಅಷ್ಟರಮಟ್ಟಿಗೆ ಬಿಜೆಪಿ ಆಂತರಿಕ ಜಗಳ ತಾರಕಕ್ಕೇರಿ, ಬೀದಿ ಕದನದ ಸ್ವರೂಪಕ್ಕೆ ತಿರುಗಿತ್ತು.

ವಿಜಯೇಂದ್ರ ಅವರನ್ನು ಪಕ್ಷದಿಂದ ಇಳಿಸಿಯೇ ಸಿದ್ಧ ಎಂದು ಪ್ರತಿಪಾದಿಸುತ್ತಿರುವ ಗುಂಪಿನ ನೇತೃತ್ವ ಯತ್ನಾಳ ಅವರದ್ದಾದರೂ ಆ ಬಣದಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಬಹುತೇಕ ಸಂಸದರೂ ತಮ್ಮ ಬೆಂಬಲಕ್ಕೆ ಇದ್ದಾರೆ; ಅವರು ಬಹಿರಂಗವಾಗಿ ತಮ್ಮ ನಿಲುವು ಪ್ರಕಟಿಸುತ್ತಿಲ್ಲ ಎಂಬುದು ಯತ್ನಾಳ ಬಣದವರ ಮಾತು. 

ADVERTISEMENT

ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಶುರುವಾದ ಯತ್ನಾಳ ಸಮರ ಈವರೆಗೂ ನಿಂತಿಲ್ಲ. ಸಣ್ಣ ಮಟ್ಟದಲ್ಲಿದ್ದ ಈ ಗುಂಪು ಇತ್ತೀಚೆಗೆ ಬಲಿಷ್ಠವಾಗತೊಡಗಿತ್ತು. ಬಹಿರಂಗವಾಗಿಯೇ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಯತ್ನಾಳ ಹರಿಹಾಯುತ್ತಲೇ ಬಂದಿದ್ದರು. ವಿಜಯೇಂದ್ರ ಪದಚ್ಯುತಿಯಾಗುವವರೆಗೆ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಕೂಡ ಹೇಳಿದ್ದರು. ಹೀಗಾಗಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಲವು ಹಗರಣಗಳ ಆರೋಪ, ಸರ್ಕಾರದ ಪ್ರಮುಖರ ವಿರುದ್ಧದ ತನಿಖೆಗಳು, ಬೆಲೆ ಏರಿಕೆ, ಮಧುಬಲೆ ಪ್ರಕರಣ, ರೈತರ ಆತ್ಮಹತ್ಯೆಯಂತಹ ವಿಷಯಗಳನ್ನು ಮುಂದಿಟ್ಟು ಹೋರಾಟ ನಡೆಸಬಹುದಾದ ವಿಪುಲ ಅವಕಾಶಗಳಿದ್ದರೂ ಬಣ ಜಗಳ, ನಾಯಕತ್ವದ ಪೈಪೋಟಿಯಿಂದಾಗಿ ಯಾವ ವಿಷಯದಲ್ಲೂ ಪ್ರಬಲ ಹೋರಾಟವನ್ನು ಪಕ್ಷ ನಡೆಸಲೇ ಇಲ್ಲ. ವಿಧಾನಮಂಡಲ ಅಧಿವೇಶನದಲ್ಲೂ ಈ ಒಡಕು ಢಾಳಾಗಿ ಕಾಣಿಸುತ್ತಿತ್ತು. ಸಮರ್ಥ ವಿರೋಧ ಪಕ್ಷವಾಗಿ ತನ್ನ ಹೊಣೆಯನ್ನು ನಿಭಾಯಿಸುವಲ್ಲಿ ರಾಜ್ಯದ ನಾಯಕತ್ವ ವಿಫಲವಾಯಿತು. ಇದಕ್ಕೆಲ್ಲ, ಪಕ್ಷದಲ್ಲಿನ ಆಂತರಿಕ ಜಗಳವೇ ಕಾರಣ ಎಂಬುದು ದಿಟ.

‘ವಿಜಯೇಂದ್ರ ಅವರಿಗೆ ಅಪ್ಪನ ಪ್ರಭಾವಳಿ ಬಿಟ್ಟರೆ ಪಕ್ಷವನ್ನು ಮುನ್ನಡೆಸುವ ನಾಯಕತ್ವ ಗುಣವಿಲ್ಲ. ದಶಕಗಳ ಕಾಲ ಪಕ್ಷವನ್ನು ಸಂಘಟಿಸಿದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಬದಲು ತಮ್ಮದೇ ನಡೆಯಬೇಕೆಂಬ ಧೋರಣೆಯನ್ನು ಹೊಂದಿದ್ದಾರೆ. ಬಿಜೆಪಿಯನ್ನು ಸಂಘಟಿಸುವ ಬದಲು, ಹಿಂದೆ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದಲ್ಲಿ ಗುರುತಿಸಿಕೊಂಡರವನ್ನೇ ಮುಂಚೂಣಿಗೆ ತರುವ ಯತ್ನ ನಡೆಸುವ ಅವರು, ಹಾಲಿ ಅಥವಾ ಮಾಜಿ ಶಾಸಕ, ಸಂಸದರ ಎದುರು ತಮ್ಮದೇ ಗುಂಪನ್ನು ಕಟ್ಟುತ್ತಿದ್ದಾರೆ. ಇದು ತಮ್ಮ ವರ್ಚಸ್ಸನ್ನು ವಿಸ್ತರಿಸಿಕೊಳ್ಳುವ ಯತ್ನವಾಗಿದ್ದು, ಪಕ್ಷಕ್ಕೆ ಉಪಯೋಗವಿಲ್ಲ’ ಎಂಬ ದೂರನ್ನು ಯತ್ನಾಳ ಬಣ ಮಾಡುತ್ತಲೇ ಬಂದಿದೆ. ತಂದೆಯ ಪ್ರಭಾವ ಹಾಗೂ ಸಮೃದ್ಧ ಸಂಪನ್ಮೂಲ ಹೊಂದಿಸಬಹುದಾದ ಶಕ್ತಿಯೇ ವಿಜಯೇಂದ್ರ ಅವರ ಮಿತಿಯೂ ಆಗಿದೆ. ಹೀಗಾಗಿಯೇ, ಪಕ್ಷದ ಒಳಜಗಳ ವಿಕೋಪಕ್ಕೆ ಹೋಗುತ್ತಲೇ ಇದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ್ದ ಪಕ್ಷದ ವರಿಷ್ಠರು ಈ ವರೆಗೂ ಯಾವುದೇ ಕ್ರಮವನ್ನು ಜರುಗಿಸಿರಲಿಲ್ಲ. ಪಕ್ಷದ ಹೊರಗೆ ಕಾಲಿಟ್ಟಿರುವ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್‌ ಅವರಿಗೆ ನೋಟಿಸ್ ಕೂಡ ನೀಡಿರಲಿಲ್ಲ. ವಿಜಯೇಂದ್ರ ಅವರು ಇಡೀ ಪಕ್ಷವನ್ನೇ ತನ್ನ ಏಕಸ್ವಾಮ್ಯಕ್ಕೆ ತೆಗೆದುಕೊಳ್ಳಲು ಅವಕಾಶ ನೀಡಬಾರದು ಎಂಬ ಆಲೋಚನೆಯೂ ವರಿಷ್ಠರದ್ದಾಗಿರಬಹುದು. ಹೀಗಾಗಿಯೇ, ಮೌನ ವಹಿಸಿತ್ತು ಎಂದೂ ಹೇಳಲಾಗುತ್ತಿದೆ. 

ಯತ್ನಾಳ ಉಚ್ಚಾಟನೆ ಹಾಗೂ ಭಿನ್ನರ ಬಣದ ಮೂವರಿಗೆ ನೋಟಿಸ್ ನೀಡಿರುವುದು ವಿಜಯೇಂದ್ರ ಅವರ ಸದ್ಯದ ಮೇಲುಗೈ. ಹಾಗಂತ, ನೋಟಿಸ್ ಪಡೆದವರು ಸುಮ್ಮನೆ ಕೂರುವವರಲ್ಲ. ಆದರೆ, ವರಿಷ್ಠರು ವಿಜಯೇಂದ್ರ ಪರ ಇದ್ದಾರೆ ಎಂಬುದು ಖಚಿತವಾದರಷ್ಟೇ, ಭಿನ್ನರ ಬಣ ಮೌನಕ್ಕೆ ಸರಿದೀತು. ಯತ್ನಾಳರಿಗೆ ನೋಟಿಸ್ ನೀಡುವ ಮೂಲಕ, ವಿಜಯೇಂದ್ರಗೆ ಅವಕಾಶವನ್ನು ಕಲ್ಪಿಸಲಾಗಿದೆ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ವಿಜಯೇಂದ್ರ ಹೇಗೆ ಮುನ್ನಡೆಯಲಿದ್ದಾರೆ ಎಂಬುದಷ್ಟೇ ಅವರ ಭವಿಷ್ಯವನ್ನು ನಿರ್ಧರಿಸಲಿದೆ.

ಮೋಕ್ಷ ಸಾಧ್ಯವೇ?

‘ಗಜೇಂದ್ರ ಮೋಕ್ಷ’ದಂತೆ ವಿಜಯೇಂದ್ರ ಮೋಕ್ಷವೂ ಸನ್ನಿಹಿತವಾಗಿದೆಯೇ? ಗಜೇಂದ್ರ ಎಂಬ ಆನೆಯು ‘ಕಮಲ’ವನ್ನು ತರಲು ಸರೋವರಕ್ಕೆ ಹೋಗಿತ್ತು. ಆಗ, ಮೊಸಳೆಯೊಂದು ಅದರ ಕಾಲನ್ನು ಬಲವಾಗಿ ಹಿಡಿದುಕೊಂಡಿತು. ಕಮಲವನ್ನು ವಿಷ್ಣುವಿಗೆ ಸಲ್ಲಿಸಿದ ಗಜೇಂದ್ರ ಮೊಸಳೆಯಿಂದ ಮುಕ್ತಿ ಪಡೆದಿದ್ದ. ವಿಜಯೇಂದ್ರರ ಕೈಗೆ ಪಕ್ಷದ ವರಿಷ್ಠರು ‘ಕಮಲ’ ಕೊಟ್ಟು ಬಹಳ ಕಾಲವಾಯಿತು. ಆ ಕಮಲವನ್ನು ಜನರ ಮುಂದೆ ಹಿಡಿದು ಓಡಾಡುವ ಬದಲು ಜೇಬಿನಲ್ಲಿಟ್ಟುಕೊಂಡಿದ್ದೇ, ವಿರೋಧಿಗಳು ಅವರ ಕಾಲು ಹಿಡಿದು ಎಳೆಯಲು ಕಾರಣ. ಈಗ ‘ಕಮಲ’ವನ್ನು ವಿಜಯೇಂದ್ರ ಏನು ಮಾಡುವವರು ಎಂಬುದರ ಮೇಲೆ ಅವರ ಭವಿಷ್ಯ ನಿಂತಿದೆ.

‘ಉಗ್ರ ಹಿಂದುತ್ವವಾದಿಗಳು ಬದಿಗೆ’

ಯತ್ನಾಳ ಅವರನ್ನು ಉಚ್ಚಾಟಿಸುವ ಮೂಲಕ, ಕೇಸರಿ ಪಡೆಯಲ್ಲಿದ್ದ ಬಹುತೇಕ ಉಗ್ರ ಹಿಂದುತ್ವವಾದಿಗಳನ್ನು ಬದಿಗೆ ಸರಿಸಿದಂತಾಗಿದೆ. ಈಗಾಗಲೇ ಅನಂತಕುಮಾರ ಹೆಗಡೆ, ಕೆ.ಎಸ್. ಈಶ್ವರಪ್ಪ ಮೂಲೆ ಸೇರಿದ್ದಾರೆ. ಟಿಕೆಟ್ ಕೊಡದೇ ಇರುವ ಕಾರಣಕ್ಕೆ ಪ್ರತಾಪ ಸಿಂಹ, ಚಿಕ್ಕಮಗಳೂರಿನಲ್ಲಿ ಸೋತ ಬಳಿಕ ಸಿ.ಟಿ. ರವಿ, ಮತ್ತೊಮ್ಮೆ ಕೇಂದ್ರ ಸಚಿವೆಯಾದ ಬಳಿಕ ಶೋಭಾ ಕರಂದ್ಲಾಜೆ ಎಲ್ಲರೂ ತಮ್ಮ ರಾಗ ಬದಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.