ADVERTISEMENT

ಗಾಣಿಗ ಸಂಸ್ಥಾನಕ್ಕೆ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಪೀಠಾಧಿಪತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 15:52 IST
Last Updated 6 ಏಪ್ರಿಲ್ 2022, 15:52 IST
ಬಿ.ಜೆ. ಪುಟ್ಟಸ್ವಾಮಿ
ಬಿ.ಜೆ. ಪುಟ್ಟಸ್ವಾಮಿ   

ಬೆಂಗಳೂರು: ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿರುವ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಅವರು ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಆಯ್ಕೆಯಾಗಿದ್ದು, ಮೇ 15ರಂದು ಪಟ್ಟಾಭಿಷೇಕ ನೆರವೇರಲಿದೆ.

ಮಾಜಿ ಸಚಿವರೂ ಆಗಿರುವ ಪುಟ್ಟಸ್ವಾಮಿ, ಮಠಾಧಿಪತಿಯಾಗುವ ನಿರ್ಧಾರ ಕೈಗೊಂಡಿದ್ದಾರೆ. ಮೇ 6ರಂದು ದೀಕ್ಷೆ ಪಡೆಯಲಿದ್ದು, 15ಕ್ಕೆ ಪಟ್ಟಾಭಿಷೇಕ ಸಮಾರಂಭ ನಿಗದಿಯಾಗಿದೆ. ಮಾದನಾಯಕನಹಳ್ಳಿಯಲ್ಲಿರುವ ಮಠವನ್ನು ಸ್ವರ್ಣಾನಂದ ಪುರಿ ಸ್ವಾಮೀಜಿ ಎಂಬ ಹೆಸರಿನೊಂದಿಗೆ ಅವರು ಮುನ್ನಡೆಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಬಿ.ಎಸ್‌. ಯಡಿಯೂರಪ್ಪ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವರಿಗೆ ಪುಟ್ಟಸ್ವಾಮಿ ಖುದ್ದಾಗಿ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ.

ADVERTISEMENT

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಪ್ರಯತ್ನದಿಂದ 8 ಎಕರೆ ಜಮೀನು ಹಾಗೂ ₹ 5 ಕೋಟಿ ಅನುದಾನವನ್ನು ಗಾಣಿಗ ಸಮುದಾಯದ ಮಠಕ್ಕೆ ಮಂಜೂರು ಮಾಡಿದ್ದರು. 2016ರಲ್ಲೇ ಮಠದ ಉದ್ಘಾಟನೆಯಾಗಿದೆ. ಪೀಠಾಧಿಪತಿಯನ್ನಾಗಿ ಮಾಡಲು ಮೂವರು ಯುವಕರನ್ನು ತರಬೇತಿಗೆ ಕಳುಹಿಸಲಾಗಿತ್ತು. ಆದರೆ, ಆ ಪ್ರಯತ್ನ ಫಲ ನೀಡಿರಲಿಲ್ಲ’ ಎಂದು ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜರಾಜೇಶ್ವರಿ ನಗರದ ಜಯೇಂದ್ರ ಪುರಿ ಸ್ವಾಮೀಜಿ ಬಳಿ ಒಬ್ಬ ಯುವಕನನ್ನು ತರಬೇತಿಗೆ ನಿಯೋಜಿಸಲಾಗಿತ್ತು. ಅಲ್ಲಿ ಇತ್ತೀಚೆಗೆ ನಡೆದ ಯಾಗವೊಂದರಲ್ಲಿ ಭಾಗಿಯಾಗಿದ್ದೆ. ನೀವೇ ಮೊದಲ ಪೀಠಾಧಿಪತಿಯಾಗಬೇಕೆಂದು ದೇವಿಯ ಅನುಗ್ರಹವಾಗಿದೆ ಎಂದು ಸೂಚಿಸಿದರು. ಅವರ ಆದೇಶದಂತೆ ಮೊದಲ ಪೀಠಾಧಿಪತಿಯಾಗಲು ಒಪ್ಪಿಕೊಂಡಿದ್ದೇನೆ’ ಎಂದರು.

‘ಸಮುದಾಯದ ಮುಖಂಡರ ಜತೆ ಎರಡು ಬಾರಿ ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಕುಟುಂಬದವರಿಗೂ ತಿಳಿಸಲಾಗಿದೆ. ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲಿ ರಾಜೀನಾಮೆ ನೀಡುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.