ADVERTISEMENT

ರಾಜ್ಯ ಕಾಂಗ್ರೆಸ್‌ ಸರ್ಕಾರ ಶೇ 80 ರಷ್ಟು ಕಮಿಷನ್‌ ಪಡೆಯುತ್ತಿದೆ: ಅಶೋಕ ಕಿಡಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 14:13 IST
Last Updated 29 ಸೆಪ್ಟೆಂಬರ್ 2025, 14:13 IST
ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಶೇ 80 ರಷ್ಟು ಕಮಿಷನ್‌ ಪಡೆಯುತ್ತಿರುವುದು ಈಗ ಸಾಬೀತಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸರ್ಕಾರವನ್ನು ಶೇ 40 ಕಮಿಷನ್‌ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದರು. ಈಗ ಗುತ್ತಿಗೆದಾರರ ಸಂಘವೇ, ಕಾಂಗ್ರೆಸ್ ದುಪ್ಪಟ್ಟು ಕಮಿಷನ್ ಪಡೆಯುತ್ತಿದೆ ಎಂದು ಹೇಳಿ ಮುಖ್ಯಮಂತ್ರಿಯವರಿಗೇ ಪತ್ರ ಬರೆದಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರಕ್ಕೆ ಮಾನ– ಮರ್ಯಾದೆ ಇದ್ದರೆ ಕೂಡಲೇ ಸರ್ಕಾರದಲ್ಲಿರುವ ಎಲ್ಲರೂ ರಾಜೀನಾಮೆ ನೀಡಬೇಕು. ಸಚಿವರು ಲಂಚ ಪಡೆದಿಲ್ಲ ಎಂದಾದರೆ ಸ್ಪಷ್ಟನೆ ನೀಡಲಿ. ಇಲ್ಲವೆಂದರೆ ಎಲ್ಲರೂ ಲಂಚ ಪಡೆದಿದ್ದಾರೆ ಎಂದು ತಿಳಿಯಬೇಕಾಗುತ್ತದೆ’ ಎಂದಿದ್ದಾರೆ.

ADVERTISEMENT

‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿಯನ್ನು ಸರ್ಕಾರ ದಿಢೀರ್ ಎಂದು ರದ್ದು ಮಾಡಿದೆ. ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಕಾರಣಕ್ಕೆ ಈ ಕ್ರಮ ವಹಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ‘ಪೇಸಿಎಂ’ ಎಂಬ ಪೋಸ್ಟರ್ ಅಂಟಿಸಿ ಗುಲ್ಲೆಬ್ಬಿಸಿದ್ದರು. ಶೇ 80 ರಷ್ಟು ಕಮಿಷನ್‌ ಬಗ್ಗೆ ರಾಹುಲ್‌ಗಾಂಧಿ ಉತ್ತರ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ದುಪ್ಪಟ್ಟು ಕಮಿಷನ್‌ ಫಾರ್ಮುಲಾ ಯಾವುದು?’

‘ದುಪ್ಪಟ್ಟು ಕಮಿಷನ್‌ಗೆ ಕಾರಣವಾಗಿರುವ ಫಾರ್ಮುಲಾ ಯಾವುದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು‘ಜ್ಯೇಷ್ಠತೆ ಮತ್ತು ಪಾರದರ್ಶಕತೆಯನ್ನು ಮೀರಿ ಸ್ಪೆಷಲ್‌ ಫಾರ್ಮುಲಾ ಮೂಲಕ 15 ರಿಂದ 20 ರಷ್ಟು ಗುತ್ತಿಗೆದಾರರಿಗೆ ಮಾತ್ರ ಎಲ್‌ಒಸಿ ಬಿಡುಗಡೆ ಆಗುತ್ತಿದೆ ಎಂದು ಆರೋಪಿಸಿರುವ ಗುತ್ತಿಗೆದಾರರ ಸಂಘ ನಿಮ್ಮ ಆಪ್ತ ಸಚಿವರ ಇಲಾಖೆಗಳಲ್ಲೇ ಈ ರೀತಿ ವ್ಯವಸ್ಥೆ ಇದೆ ಎಂದು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ದೂರಿದೆ. ಹಾಗಾದರೆ ಈ ಸ್ಪೆಷಲ್‌ ಫಾರ್ಮುಲಾ ವ್ಯವಸ್ಥೆ ಇರುವುದು ನಿಮ್ಮ ಗಮನಕ್ಕೂ ಇದೆ ಎಂದೇ ಅರ್ಥವಲ್ಲವೇ? ಗೊತ್ತಿದ್ದೂ ಸುಮ್ಮನಿರುವುದು ಎಂದರೆ ಅರ್ಥವೇನು?’ ಎಂದು ಅವರು ಕೇಳಿದ್ದಾರೆ.

‘ಮಠದೊಳಗಿನ ಬೆಕ್ಕು ಇಲಿಯ ಕಂಡೊಡನೆ ಪುಟನೆಗೆದಂತೆ ಕಾಣ ಎಂಬಂತಾಗಿದೆ ನಿಮ್ಮ ಸ್ಥಿತಿ. ನಿಮ್ಮದೀಗ 50–50 ಅವಧಿಯ ಶೇ 80ರ ಸರ್ಕಾರ’ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.