ADVERTISEMENT

ಸಮೀಕ್ಷೆಯಲ್ಲಿ ಬಹುಮತದ ಸಾಧ್ಯತೆ ತೋರಿಸಿ ಸಣ್ಣ ಪಕ್ಷಗಳನ್ನು ಸೆಳೆಯಲು ಮೋದಿ ತಂತ್ರ

ಇದು ಎಕ್ಸಿಟ್‌ ಪೋಲ್‌ಗಳಷ್ಟೇ, ಎಕ್ಸಾಕ್ಟ್‌ ಪೋಲ್‌ಗಳಲ್ಲ 

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:25 IST
Last Updated 20 ಮೇ 2019, 20:25 IST
   

ಬೆಂಗಳೂರು: ಕೇಂದ್ರದಲ್ಲಿ ಸರ್ಕಾರ ರಚಿಸಲು ಎದುರಾಗಬಹುದಾದ ಸ್ಥಾನಗಳ ಕೊರತೆಗಳನ್ನು ಸಣ್ಣ ಪುಟ್ಟ ಪಕ್ಷಗಳನ್ನು ಸೆಳೆಯುವ ಮೂಲಕ ತುಂಬಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಮೀಕ್ಷೆಗಳೆಂಬ ತಂತ್ರ ಹೆಣೆದಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಮತಯಂತ್ರ ಅಕ್ರಮ, ಸಮೀಕ್ಷೆ ಕುರಿತು ಇಂದು ಸರಣಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು, ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಸಿಎಂ ಟ್ವೀಟ್‌ನಲ್ಲಿ ಏನಿದೆ?

ADVERTISEMENT

ನರೇಂದ್ರ ಮೋದಿ ಆಡಳಿತದಲ್ಲಿ ಮತಯಂತ್ರಗಳ ಅಕ್ರಮದ ಬಗ್ಗೆ ಬಹುತೇಕ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿರುವ ವಿಪಕ್ಷಗಳು, ಚುನಾವಣೆ ಆಕ್ರಮ ತಡೆಯುವ ಸಲುವಾಗಿ ಸಾಂಪ್ರದಾಯಿಕ ಮತಪತ್ರಗಳನ್ನೇ ಜಾರಿಗೆ ತರುವಂತೆ ಮನವಿ ಮಾಡಿವೆ. ಜಗತ್ತಿನಾದ್ಯಂತ ಈಗಲೂ ಮತ ಪತ್ರಗಳ ಮೂಲಕವೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮುಂದುವರಿದ ದೇಶಗಳೂ ಇನ್ನೂ ಮತಪತ್ರ ವ್ಯವಸ್ಥೆಯನ್ನೇ ಹೊಂದಿವೆ.

ಮೇ.19ರಂದು ಪ್ರಕಟವಾದ ಚುನಾವಣೆ ಮತಗಟ್ಟೆ ಸಮೀಕ್ಷೆಯೂ ಮತಯಂತ್ರಗಳ ಅಕ್ರಮದ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆಗಳನ್ನು ಮೋದಿ ಅವರೇ ಮಾಡಿಸಿದ್ದಾರೆ. ಈ ರೀತಿಯ ತಂತ್ರಗಳ ಮೂಲಕ ಸಣ್ಣಪುಟ್ಟ ಪಕ್ಷಗಳನ್ನು ತಮ್ಮತ್ತ ಸೆಳೆದು ಕೊರತೆ ತುಂಬಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ.

ತಮ್ಮ ಪರವಾದ ವಾತಾವರಣವಿದೆ ಎಂಬ ಸುಳ್ಳು ಅಲೆ ಸೃಷ್ಟಿಸಲು ಈ ಸಮೀಕ್ಷೆಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಇವು ಎಕ್ಸಿಟ್‌ ಪೋಲ್‌ಗಳೇ (ಮತಗಟ್ಟೆ ಸಮೀಕ್ಷೆಗಳು) ಹೊರತು, ಎಕ್ಸಾಕ್ಟ್‌ (ನಿಖರ) ಪೋಲ್‌ಗಳಲ್ಲ ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.