ADVERTISEMENT

ಪರಿಷತ್ ಉಪ ಸಭಾಪತಿಯಾಗಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 15:33 IST
Last Updated 29 ಜನವರಿ 2021, 15:33 IST
ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ಬಿಜೆಪಿ ಸದಸ್ಯ ಪ್ರಾಣೇಶ್ ಸಭಾಪತಿ ಪೀಠದಲ್ಲಿ ಆಸೀನರಾದರು –ಪ್ರಜಾವಾಣಿ ಚಿತ್ರ-Pic By/ Krishnakumar P S
ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ಬಿಜೆಪಿ ಸದಸ್ಯ ಪ್ರಾಣೇಶ್ ಸಭಾಪತಿ ಪೀಠದಲ್ಲಿ ಆಸೀನರಾದರು –ಪ್ರಜಾವಾಣಿ ಚಿತ್ರ-Pic By/ Krishnakumar P S   

ಬೆಂಗಳೂರು: ವಿಧಾನ ಪರಿಷತ್‌ನ ನೂತನ ಉಪ ಸಭಾಪತಿಯಾಗಿ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್‌ ಶುಕ್ರವಾರ ಆಯ್ಕೆಯಾದರು.

ಎಸ್‌.ಎಲ್‌. ಧರ್ಮೇಗೌಡ ಅವರ ನಿಧನದ ಕಾರಣದಿಂದ ತೆರವಾಗಿದ್ದ ಉಪ ಸಭಾಪತಿ ಹುದ್ದೆಯ ಭರ್ತಿಗೆ ಶುಕ್ರವಾರ ಚುನಾವಣೆ ನಡೆಯಿತು. ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಮತ್ತು ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಪ್ರಾಣೇಶ್ ಗೆಲುವು ಸಾಧಿಸಿದರು.

ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಪ್ರಾಣೇಶ್‌ ಆಯ್ಕೆಯ ಪ್ರಸ್ತಾವವನ್ನು ಮತಕ್ಕೆ ಹಾಕಿದರು. ಕಾಂಗ್ರೆಸ್‌ ಸದಸ್ಯರು ಮತವಿಭಜನೆಗೆ ಆಗ್ರಹಿಸಿದಾಗ, ಸಭಾಪತಿ ಮಾನ್ಯ ಮಾಡಿದರು. ಜೆಡಿಎಸ್‌ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದರು. ಪ್ರಾಣೇಶ್‌ ಅವರ ಪರವಾಗಿ 41 ಮತಗಳು ಲಭಿಸಿದರೆ ವಿರುದ್ಧವಾಗಿ 24 ಮತಗಳು ಬಿದ್ದವು. ಪ್ರಾಣೇಶ್‌ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಭಾಪತಿ ಪ್ರಕಟಿಸಿದರು.

ADVERTISEMENT

ಸದನದ 74 ಸದಸ್ಯರ ಪೈಕಿ ಸಭಾಪತಿಯೂ ಸೇರಿದಂತೆ 66 ಸದಸ್ಯರು ಮಾತ್ರ ಚುನಾವಣೆ ವೇಳೆ ಹಾಜರಿದ್ದರು. ಎಂಟು ಮಂದಿ ಗೈರಾಗಿದ್ದರು. 65 ಸದಸ್ಯರು ಮತ ಚಲಾಯಿಸಿದರು.

ನೂತನ ಉಪ ಸಭಾಪತಿಯನ್ನು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಸದಸ್ಯರು ಅಭಿನಂದಿಸಿದರು. ಡಿಸೆಂಬರ್‌ 15ರ ಘಟನೆಯನ್ನು ನೆನಪಿಸಿಕೊಂಡ ಬಹುತೇಕರು, ಮತ್ತೆ ಅಂತಹ ಸ್ಥಿತಿ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂಬ ಸಲಹೆ ನೀಡಿದರು.

ತಾರತಮ್ಯ ಮಾಡುವುದಿಲ್ಲ: ಆಯ್ಕೆಯ ಬಳಿಕ ಮಾತನಾಡಿದ ಪ್ರಾಣೇಶ್, ‘ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ರಾಜಕೀಯ ಪ್ರವೇಶಿಸಿದವನು. ನಡವಳಿಕೆ ಹೇಗಿರಬೇಕು ಎಂಬುದನ್ನು ಸಂಘಟನೆಯಲ್ಲೇ ಕಲಿತಿರುವೆ. ಇಷ್ಟರವರೆಗೂ ಪಕ್ಷ ನನ್ನನ್ನು ಎತ್ತರಕ್ಕೆ ಬೆಳೆಸಿದೆ. ಉಪ ಸಭಾಪತಿ ಹುದ್ದೆಯಲ್ಲಿ ಕುಳಿತು ಯಾವುದೇ ತಾರತಮ್ಯ ಆಗದಂತೆ ಕಾರ್ಯನಿರ್ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಉಪ ಸಭಾಪತಿಯಾಗಿ ಆಯ್ಕೆಯಾದ ದಿನವೇ ಪ್ರಾಣೇಶ್‌ ಅವರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಪೀಠದಲ್ಲಿ ಕುಳಿತು ಪ್ರಶ್ನೋತ್ತರ ಕಲಾಪವನ್ನು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.