ADVERTISEMENT

ಸಿದ್ದರಾಮಯ್ಯ ನಾಲಿಗೆಗೆ ಲಂಗು ಲಗಾಮು, ಸಂಸ್ಕಾರ ಇಲ್ಲ: ಬಿ.ಎಲ್.ಸಂತೋಷ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 12:26 IST
Last Updated 15 ಡಿಸೆಂಬರ್ 2021, 12:26 IST
ಬಿ.ಎಲ್.ಸಂತೋಷ್ – ಸಂಗ್ರಹ ಚಿತ್ರ
ಬಿ.ಎಲ್.ಸಂತೋಷ್ – ಸಂಗ್ರಹ ಚಿತ್ರ   

ಉಡುಪಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಾಲಿಗೆಗೆ ಲಂಗು, ಲಗಾಮು, ಸಂಸ್ಕಾರ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಾಗ್ದಾಳಿ ನಡೆಸಿದರು.

ನಗರದ ಪುರಭವನದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಮಟ್ಟದ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿ ‘ಕಾಂಗ್ರೆಸ್‌ ಆಡಳಿತದಲ್ಲಿ ದೇಶದೊಳಗೆ ಅಪರಿಮಿತ ನಾಯಕರ ಅಸಹಜ ಸಾವುಗಳು ಸಂಭವಿಸಿವೆ. ಮೃತರಲ್ಲಿ ಶ್ಯಾಮ್‌ಪ್ರಸಾದ್ ಮುಖರ್ಜಿ ಪ್ರಮುಖರು. ಆದರೂ, ದೇಶಕ್ಕೋಸ್ಕರ ಯಾವ ಬಿಜೆಪಿ ನಾಯಕರು ಬಲಿದಾನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಪದೇಪದೇ ಪ್ರಶ್ನಿಸುತ್ತಾರೆ’ ಎಂದು ಕುಟುಕಿದರು.

ಶ್ಯಾಮ್‌ಪ್ರಸಾದ್ ಮುಖರ್ಜಿ ಯಾರು? ಯಾವ ಕಾರಣಕ್ಕೆ ಮೃತಪಟ್ಟರು? ಕಾಂಗ್ರೆಸ್ ಆಡಳಿತವಿದ್ದರೂ ಅವರ ಸಾವಿನ ತನಿಖೆ ಏಕೆ ನಡೆಯಲಿಲ್ಲ ಎಂದು ಸಿದ್ದರಾಮಯ್ಯನವರು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡರೆ ಉತ್ತರ ಸಿಗಬಹುದು ಎಂದರು.

‘ಸಿದ್ದರಾಮಯ್ಯನವರ ಟೀಕೆಗಳಿಗೆ ಉತ್ತರಿಸಲು ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ಅಧಿಕಾರದಲ್ಲಿ ಕೂರಿಸಿಲ್ಲ. ಕಾಂಗ್ರೆಸ್‌ 70 ವರ್ಷ ಏನೂ ಮಾಡಲಿಲ್ಲ. ನೀವು ಮಾಡಿ ತೋರಿಸಿ ಎಂದು ಅಧಿಕಾರ ನೀಡಿದ್ದಾರೆ. ಟೀಕೆಗಳಿಗೆ ಉತ್ತರ ಕೊಡುತ್ತಾ ಹೋದರೆ ಕೊಚ್ಚೆಯ ಮೇಲೆ ಕಲ್ಲು ಎಸೆದಂತಾಗುತ್ತದೆ. ಸಿದ್ದರಾಮಯ್ಯ ಈಗಾಗಲೇ ಕಸದಬುಟ್ಟಿಗೆ ಬಿದ್ದಿದ್ದು, ಮುಂದೆ ದೊಡ್ಡ ಕಸದಬುಟ್ಟಿಗೆ ಬೀಳಲಿದ್ದಾರೆ’ ಎಂದು ಸಂತೋಷ್‌ ಹೇಳಿದರು.

‘ಈಚೆಗೆ ರಾಜ್ಯದ ಮತ್ತೊಬ್ಬರು ನಾಯಕರು ಅಪರೂಪಕ್ಕೆ ಪುಸ್ತಕವೊಂದನ್ನು ಓದಿ 15 ದಿನ ಪುಂಖಾನುಪುಂಖವಾಗಿ ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡಿದರು. ಇಂತಹ ಟೀಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮುತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.