ADVERTISEMENT

ಬಿಜೆಪಿಗೆ ಜನರ ಸಂಕಷ್ಟ ನಗಣ್ಯ, ಸಿ.ಎಂ ಬದಲಾವಣೆಯೇ ಮುಖ್ಯ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:52 IST
Last Updated 23 ಜುಲೈ 2021, 16:52 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಕೋವಿಡ್‌ ಬಿಕ್ಕಟ್ಟು, ಮಳೆ ಅನಾಹುತದ ನಡುವೆಯೇ ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ಪ್ರಯತ್ನಿಸುತ್ತಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರದಲ್ಲಿ ಗೊಂದಲ ಸೃಷ್ಟಿಸಿರುವ ಬಿಜೆಪಿ, ಜನರ ಸಮಸ್ಯೆಗಳನ್ನು ತನಗೆ ನಗಣ್ಯ ಎಂಬುದಾಗಿ ತೋರಿಸುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಪ್ರತಿ ಬಾರಿಯೂ ರಾಜ್ಯದಲ್ಲಿ ಮಳೆ, ಪ್ರವಾಹದಂತಹ ಸ್ಥಿತಿ ಇರುವಾಗ ಬಿಜೆಪಿ ನಾಯಕರು ಗೊಂದಲ ಸೃಷ್ಟಿಸುತ್ತಾರೆ. ಹಿಂದೆಯೂ ಹೀಗೆಯೇ ಆಗಿತ್ತು. ಆಡಳಿತ ಪಕ್ಷವು ಜನರ ಸಮಸ್ಯೆಗಿಂತಲೂ ನಾಯಕತ್ವ ಬದಲಾವಣೆಗೇ ಆದ್ಯತೆ ನೀಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಠಾಧೀಶರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಸಂದೇಶ ರವಾನೆಗೆ ಯತ್ನಿಸಿದ್ದಾರೆ. ಆ ಬಗ್ಗೆ ತಾವು ಲಘುವಾಗಿ ಮಾತನಾಡುವುದಿಲ್ಲ. ಮಠಾಧೀಶರ ವರ್ತನೆ ಸರಿಯೋ ಅಥವಾ ತಪ್ಪೋ ಎಂಬುದನ್ನು ನಿರ್ಧರಿಸುವುದನ್ನು ಜನರ ವಿವೇಚನೆಗೆ ಬಿಡುವುದಾಗಿ ಹೇಳಿದರು.

ADVERTISEMENT

ಪಾದಯಾತ್ರೆಗೆ ಸಜ್ಜು: ಮೇಕೆದಾಟು, ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಜೆಡಿಎಸ್‌ನಿಂದ ಪಾದಯಾತ್ರೆ ನಡೆಸಲಾಗುವುದು. ಈ ಮೂರೂ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದನ್ನು ಮನವರಿಕೆ ಮಾಡಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ಮೊದಲ ಹಂತದಲ್ಲಿ 26 ಜಿಲ್ಲೆಗಳ ಪಕ್ಷದ ಮುಖಂಡರ ಜತೆ ಸಭೆ ನಡೆಸಲಾಗಿದೆ. ಆಷಾಢ ಮಾಸ ಮುಗಿದ ಬಳಿಕ ಎರಡನೇ ಹಂತದ ಸಭೆಗಳನ್ನು ಆರಂಭಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.