ADVERTISEMENT

Kogilu Demolition | ಇದೇ 5ಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 15:45 IST
Last Updated 1 ಜನವರಿ 2026, 15:45 IST
ಶಾಸಕ ಎಸ್‌.ಆರ್‌.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಬಿಜೆಪಿ ಸತ್ಯಶೋಧನಾ ತಂಡದ ಸಭೆ ನಡೆಯಿತು.
ಶಾಸಕ ಎಸ್‌.ಆರ್‌.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಬಿಜೆಪಿ ಸತ್ಯಶೋಧನಾ ತಂಡದ ಸಭೆ ನಡೆಯಿತು.   

ಬೆಂಗಳೂರು: ‘ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದಲ್ಲಿ ವಿದೇಶಿ ವಲಸಿಗರಿಗೆ ಮನೆ ಹಂಚಿಕೆ ಮಾಡಿದರೆ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಅಲ್ಲದೇ, ಸರ್ಕಾರದ ವಿರುದ್ಧ ಇದೇ 5ರಂದು ಬೃಹತ್‌ ಪ್ರತಿಭಟನೆ ನಡೆಸುತ್ತೇವೆ’ ಎಂದು ಬಿಜೆಪಿಯ ಸತ್ಯ ಶೋಧನಾ ತಂಡದ ಅಧ್ಯಕ್ಷರೂ ಆದ ಶಾಸಕ ಎಸ್.ಆರ್‌.ವಿಶ್ವನಾಥ್‌ ತಿಳಿಸಿದರು.

ಈ ಪ್ರಕರಣದ ಅಧ್ಯಯನಕ್ಕಾಗಿ ರಚಿಸಲಾದ ತಂಡದ ಮೊದಲ ಸಭೆ ಗುರುವಾರ ನಡೆಯಿತು. ಆ ಬಳಿಕ ವಿಶ್ವನಾಥ್‌ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಬಡಾವಣೆಯಲ್ಲಿನ ಸರ್ವೇ ನಂಬರ್‌ಗಳು, ಯಾವ ರಾಜ್ಯ ಮತ್ತು ಯಾವ ದೇಶದವರು ವಾಸ ಇದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಒಂದು ವಾರದಲ್ಲಿ ಪಕ್ಷದ ಅಧ್ಯಕ್ಷರಿಗೆ ವರದಿ ಕೊಡುತ್ತೇವೆ. ಯಾರಿಗೇ ಆಗಲಿ, ಮನೆ ಕೆಡವಿದ ವಾರದಲ್ಲೇ ತರಾತುರಿಯಲ್ಲಿ ಮನೆ ವಿತರಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‘ಬೈಯಪ್ಪನಹಳ್ಳಿಯಲ್ಲಿ 14 ಮಹಡಿಗಳ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ನಡೆದಿದೆ. ಆನ್‌ಲೈನ್‌ನಲ್ಲಿ ಶೇ 50ರಷ್ಟು ಮನೆಗಳ ಮಂಜೂರಾತಿ ನಡೆದಿದೆ. ಶಾಸಕರ ವಿವೇಚನೆಗೆ ಮೀಸಲಾದ ಶೇ 50ರಷ್ಟು ಮನೆಗಳ ಹಂಚಿಕೆ ನಡೆದಿಲ್ಲ. ಮನೆಗಾಗಿ ಆರು ವರ್ಷಗಳಿಂದ ಕಾಯುತ್ತಿರುವವರಿಗೇ ಇನ್ನೂ ಕೊಟ್ಟಿಲ್ಲ’ ಎಂದರು.

ಒಂದು ಮನೆಗೆ ಒಬ್ಬ ಫಲಾನುಭವಿ ₹10.5 ಲಕ್ಷ ಪಾತಿಸಬೇಕು. ಆತ ಬ್ಯಾಂಕ್ ಸಾಲ ಅಥವಾ ಸ್ವಂತ ಹಣ ಪಾವತಿಸಬೇಕು. ಆದರೆ, ಮನೆ ಕಳೆದುಕೊಂಡವರಿಗೆ ಜಿಬಿಎಯಿಂದ ₹5 ಲಕ್ಷ , ಅಲ್ಪಸಂಖ್ಯಾತ ಇಲಾಖೆಯಿಂದ ₹2.50 ಲಕ್ಷ ನೀಡಲಾಗುತ್ತದೆ. ಫಲಾನುಭವಿ ₹2.50 ಲಕ್ಷ ಮಾತ್ರ ಪಾವತಿಸಿದರೆ ಸಾಕು ಎಂದು ಸರ್ಕಾರ ಹೇಳಿದೆ. ಬೆಂಗಳೂರು ಸುತ್ತ 45 ಸಾವಿರ ಮನೆಗಳು ನಿರ್ಮಾಣ ಆಗುತ್ತಿವೆ. ಇವರಿಗೂ ಇದೇ ಮಾನದಂಡ ಅನ್ವಯ ಆಗುತ್ತದೆಯಾ? ಇವರಿಗೂ ಅದೇ ರೀತಿ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಸತ್ಯ ಶೋಧನಾ ತಂಡದ ಸದಸ್ಯರೂ ಆಗಿರುವ ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್ ಹರೀಶ್ ಸಭೆಯಲ್ಲಿ ಭಾಗವಹಿಸಿದ್ದರು.

‘ಎಲ್ಲರಿಗೂ ಒಂದೇ ಮಾನದಂಡ ಇರಲಿ’

ಇವರಿಗೆ ತಕ್ಷಣದಲ್ಲೇ ಏಕೆ ಪುನರ್ವಸತಿ ಮಾಡಬೇಕು? ಮನೆ ಇಲ್ಲದವರು ಸಾಕಷ್ಟು ಜನ ಇದ್ದಾರೆ. ಕೋಗಿಲು ಸಂತ್ರಸ್ತರು ಮಾತ್ರ ₹2.50 ಲಕ್ಷ ಕಟ್ಟಬೇಕು ಎಂದು ನಿರ್ಣಯ ಮಾಡುವ ಬದಲಿಗೆ ಎಲ್ಲರಿಗೂ ಒಂದೇ ಕಾನೂನು ಮಾಡಿ. ಬೆಂಗಳೂರಿನಲ್ಲಿ 40 ಕಡೆಗಳಲ್ಲಿ ವಸತಿ ಸಮುಚ್ಛಯ ನಿರ್ಮಾಣ ಆಗುತ್ತಿದೆ. ಎಲ್ಲ ಫಲಾನುಭವಿಗಳಿಗೂ ರಿಯಾಯಿತಿ ನೀಡಬೇಕು. ಇಡೀ ಬೆಂಗಳೂರನ್ನು ಒಂದೇ ರೀತಿ ನೋಡಬೇಕು. 
ಎಸ್.ಟಿ. ಸೋಮಶೇಖರ್ ಬಿಜೆಪಿ ಉಚ್ಛಾಟಿತ ಶಾಸಕ

‘ವೋಟ್‌ ಬ್ಯಾಂಕ್ ಪೋಷಣೆ’

ರಾಜ್ಯ ಸರ್ಕಾರ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕೋಗಿಲು ಬಡಾವಣೆಯಲ್ಲಿ 15–20 ವರ್ಷಗಳಿಂದ ಜನ ವಾಸ ಇದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಎಷ್ಟು ಜನ ಅಲ್ಲಿ ಎಷ್ಟು ವರ್ಷಗಳಿಂದ ವಾಸವಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗ ಸಂತ್ರಸ್ತರಿಗೆ ಮನೆ ಕೊಡಲು ಸರ್ಕಾರ ಸಿದ್ಧವಿಲ್ಲ. ವಲಸಿಗರ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿಯೇ  ಹೆಚ್ಚಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಮನೆ ಹಂಚುವ ಮೂಲಕ ಓಲೈಕೆಗೆ ಮುಂದಾಗಿದೆ.
ಎಸ್‌.ಸುರೇಶ್ ಕುಮಾರ್ ಬಿಜೆಪಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.