ADVERTISEMENT

ಎಐಸಿಸಿ ಅಧ್ಯಕ್ಷ ಸ್ಥಾನ ದಲಿತರಿಗೆ ಬಿಟ್ಟುಕೊಡಬಹುದಿತ್ತಲ್ಲವೇ?: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2022, 13:47 IST
Last Updated 8 ಜೂನ್ 2022, 13:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸಂಘದ ಪದಾಧಿಕಾರಿಗಳ ಸ್ಥಾನದಲ್ಲಿ ಒಂದು ಜಾತಿಯವರು ಮಾತ್ರ ಯಾಕಿದ್ದಾರೆ’ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆಗೆ, ಎಐಸಿಸಿ ಅಧ್ಯಕ್ಷ ಸ್ಥಾನ ದಲಿತರಿಗೆ ಬಿಟ್ಟುಕೊಡಬಹುದಿತ್ತಲ್ಲವೇ? ಎಂದು ಬಿಜೆಪಿ ತಿರುಗೇಟು ನೀಡಿದೆ.

'ಚಡ್ಡಿರಾಮಯ್ಯ' ಎಂದು ಮೂದಲಿಸಿ ಟ್ವೀಟ್‌ ಮಾಡಿರುವ ಬಿಜೆಪಿ, 1998ರಿಂದ ಇದುವರೆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರನ್ನು ಚಿತ್ರಗಳ ಸಮೇತ ಪಟ್ಟಿ ಮಾಡಿ, ಹೋಲಿಕೆ ಮಾಡಿದೆ.

'ಸಿದ್ದರಾಮಯ್ಯ ಅವರೇ, ನೀವು ಗಾಜಿನ ಮನೆಯಲ್ಲಿ ನಿಂತು ಇನ್ನೊಬ್ಬರತ್ತ ಕಲ್ಲು ಎಸೆಯುವುದು ಎಷ್ಟು ಸರಿ? 1998ರಿಂದ ಇಲ್ಲಿಯವರೆಗೆ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನದ ಸ್ಥಿತಿ ಹೇಗಿದೆ ಎಂದು ನೋಡಿದ್ದೀರಾ? ಅದನ್ನು ನೋಡಿಯೂ ಕಾಂಗ್ರೆಸ್‌ ಪಕ್ಷ ಒಬ್ಬರ ಸ್ವತ್ತಾ ಎಂದು ಪ್ರಶ್ನಿಸಿಲ್ಲವೇಕೆ?' ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

'ಸಂಘದ ಪದಾಧಿಕಾರಿಗಳ ಸ್ಥಾನದಲ್ಲಿ ಒಂದೇ ಜಾತಿಯವರು ಇದ್ದಾರೆ ಎಂದು ವೃಥಾ ಆರೋಪ ಮಾಡುವ ಸಿದ್ದರಾಮಯ್ಯ ಅವರೇ, ಎಐಸಿಸಿ ಅಧ್ಯಕ್ಷ ಸ್ಥಾನ ಯಾವ ಜಾತಿಯವರಿಗೆಲ್ಲಾ ನೀಡಿದ್ದೀರಿ? ಅವ್ವ-ಮಗನ (ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ) ಜಾತಿಯವರಿಗೋ? ಕಾಂಗ್ರೆಸ್‌ ಪಕ್ಷಕ್ಕೆ ಅಷ್ಟೊಂದು ಬದ್ಧತೆ ಇದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನ ದಲಿತರಿಗೆ ಬಿಟ್ಟು ಕೊಡಬಹುದಿತ್ತಲ್ಲವೇ?' ಎಂದು ಬಿಜೆಪಿ ಹೇಳಿದೆ.

'ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಹೊರತಾಗಿ ಅಧ್ಯಕ್ಷರು ನೇಮಕವಾಗಲಿ ಎಂಬ ವಾದ ಮುಂಚೂಣಿಗೆ ಬಂದಾಗ ಸಿದ್ದರಾಮಯ್ಯ ಮಾಡಿದ್ದೇನು? ಗಾಂಧಿ ಕುಟುಂಬ ಹೊರತುಪಡಿಸಿ ಅನ್ಯರಿಗೆ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ ಎಂದು ನೀವು ಪತ್ರ ಬರೆದಿದ್ದೇಕೆ? ಆಗ ಸಿದ್ಧರಾಮಯ್ಯ ಅವರಿಗೇಕೆ ದಲಿತ ನಾಯಕರ ಹೆಸರು ನೆನಪಾಗಲಿಲ್ಲ?' ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

'ಸಿದ್ದರಾಮಯ್ಯ ಅವರೇ, ರಾಷ್ಟ್ರದ ಕತೆ ಬಿಡಿ, ರಾಜ್ಯದಲ್ಲಿ ನೀವು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು? ದಲಿತ ಮುಖ್ಯಮಂತ್ರಿ ವಾದ ಮುನ್ನೆಲೆಗೆ ಬಂದಾಗ ಅಧಿಕಾರ ತ್ಯಾಗದ ಬದಲು ನಾನೇ ದಲಿತ ಎಂದು ಸಬೂಬು ನೀಡಿರಲಿಲ್ಲವೇ? ಇದೆಂತ ಅನುಕೂಲಸಿಂಧು ರಾಜಕಾರಣ ನಿಮ್ಮದು?' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

97 ವರ್ಷಗಳ ಇತಿಹಾಸವಿರುವ ಆರೆಸ್ಸೆಸ್‌ ಬಳಿ ನನ್ನ ಸರಳ ಪ್ರಶ್ನೆಗಳಿಗೆ ಉತ್ತರವಿಲ್ಲವೆ? ಈ ಸಂಘಟನೆ ಅಷ್ಟೊಂದು ದುರ್ಬಲವೆ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.